ರಾಜಕೀಯ

ಜನವಿರೋಧಿ ನೀತಿ: ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ​ಪ್ರತಿಭಟನೆ

Manjula VN

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಡಿಎಂಕೆ ಸರ್ಕಾರ ವನ್ನು ಓಲೈಸಲು ಕದ್ದುಮುಚ್ಚಿ ಕಾವೇರಿ ನೀರು ಹರಿಸಿದ್ದು, ಇದು ನಾಡಿನ ರೈತರು ಮತ್ತು ಜನತೆ ಮಾಡಿದ ದ್ರೋಹವಾಗಿದೆ ಎಂದು ಬಿಜೆಪಿ ನಾಯಕರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಇಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಬರಗಾಲದಿಂದ ಜನ ತತ್ತರಿಸುತ್ತಿದ್ದು, ವಿದ್ಯುತ್ ಕಡಿತ ಮಾಡಲಾಗುತ್ತಿದೆ ಮತ್ತು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ತಮಿಳುನಾಡಿನ ಡಿಎಂಕೆ ಸರ್ಕಾರ ವನ್ನು ಓಲೈಸಲು ಕಾವೇರಿ ನೀರು ಹರಿಸುತ್ತಿದೆ. ಇದು ರಾಜ್ಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಸಕರ ಭವನ ಮತ್ತು ಕುಮಾರ ಕೃಪಾ ಅತಿಥಿ ಗೃಹ ವರ್ಗಾವಣೆ ದಂಧೆಯ ಕೇಂದ್ರವಾಗಿದೆ. ಅನ್ನಭಾಗ್ಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು, ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ, ಈಗ ಕೊಡುತ್ತಿರುವ 5 ಕೆ.ಜಿ ಅಕ್ಕಿಯೂ ಪ್ರಧಾನಿ ಮೋದಿ ಕೊಡುತ್ತಿರುವ ಅಕ್ಕಿಯಾಗಿದೆ, ಒಂದು ಕಾಳು ಅಕ್ಕಿಕೊಡದ ಸಿದ್ದರಾಮಯ್ಯ ಅವರದು ನೀಚ ಸರ್ಕಾರ ಎಂದು ಖಾರವಾಗಿ ನುಡಿದರು.

ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ವಿರುದ್ಧ ಇದೇ 16 ರಿಂದ ರಾಜ್ಯ ವ್ಯಾಪಿ ಪ್ರವಾಸ ಮಾಡುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಲು ಶ್ರಮ ಹಾಕೋಣ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವರಾದ ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮುನಿರತ್ನ, ಗೋವಿಂದ ಕಾರಜೋಳ, ಬೈರತಿ ಬಸವರಾಜ, ಸಂಸದ, ಶಾಸಕರು, ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

SCROLL FOR NEXT