ಚಿಕ್ಕಮಗಳೂರು: ನನ್ನ ಧ್ವನಿ ಹತ್ತಿಕ್ಕಲೂ ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯವಾಗಿ ತಳಮಳಗೊಂಡಿದ್ದೇನೆಂಬ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಅವರು ಹೇಳಿದ್ದಾರೆ.
ಶುಕ್ರವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಸಮಾವೇಶದಲ್ಲಿ ಭಾಗವಹಿಸಿ ಹರಿಪ್ರಸಾದ್ ಅವರು ಮಾತನಾಡಿದರು.
ನಮ್ಮ ಅಧಿಕಾರ ನಮ್ಮ ಕೈಯಲ್ಲಿದೆ. ಮೇಲ್ಜಾತಿಗಳನ್ನು ದೂಷಿಸಿ ಪ್ರಯೋಜನವಿಲ್ಲ, ನಮ್ಮ ಸಮುದಾಯದ ಜನರು ರಾಜಕೀಯ ಜಾಗೃತಿಯನ್ನು ಬೆಳೆಸಿಕೊಂಡರೆ, ಸಂವಿಧಾನದ ಚೌಕಟ್ಟಿನೊಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದರು.
ತೆರಿಗೆ ಪಾವತಿಸುವ ಜನರಿಗೆ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ, ಆದರೆ, ರಾಜಕೀಯ ಪಕ್ಷಗಳ ಭಾಗವಾಗಿರುವ ಪ್ರಬಲ ಮೇಲ್ವರ್ಗದ ಜನರು ಸರ್ಕಾರದ ಪ್ರಯೋಜನಗಳನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಶಕ್ತಿ ಪ್ರದರ್ಶನ: ಲೋಕಸಭೆ ಚುನಾವಣೆಗೂ ಮುನ್ನ ಬಿಲ್ಲವ ನಾಯಕನಿಗೆ ಸೂಕ್ತ ಸ್ಥಾನ!
ಜಿಲ್ಲೆಯಲ್ಲಿ ಬಿಲ್ಲವ, ಆರ್ಯ, ಈಡಿಗ ಮತ್ತು ಪೂಜಾರಿ ಸಮುದಾಯದ ಜನರು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಯಾರನ್ನು ಬೇಕಾದರೂ ಸೋಲಿಸುವ ಶಕ್ತಿ ಸಣ್ಣ ಸಮುದಾಯಗಳಿಗೆ ಇದೆ. ಜನಸಂಖ್ಯೆಯ ಆಧಾರದ ಮೇಲೆ ರಾಜಕೀಯ ಪ್ರಾತಿನಿಧ್ಯ ನೀಡಿದರೆ ಸೂಕ್ಷ್ಮ ಸಮುದಾಯಗಳು ಅಭಿವೃದ್ಧಿ ಹೊಂದುತ್ತವೆ. ಅಲ್ಪಸಂಖ್ಯಾತರು, ದಲಿತರು ಬದುಕುವುದು ಕಷ್ಟ ಎನ್ನಿಸಿದಾಗ ತೆಗೆದು ಕೊಂಡ ದೊಡ್ಡ ನಿರ್ಧಾರದಿಂದ ಬಿಜೆಪಿ ರಾಜ್ಯದಲ್ಲಿ ಸೋತಿದೆ. ಈ ತೀರ್ಮಾನವನ್ನು ಸಣ್ಣ ಸಮುದಾಯಗಳೂ ತೆಗೆದುಕೊಳ್ಳಬೇಕು. ಲೋಕಸಭಾ ಚುನಾವಣೆ ಒಳಗಾಗಿ ಶಕ್ತಿ ಪ್ರದರ್ಶನ ಮಾಡಬೇಕು. ಇಲ್ಲವಾದರೆ ಯಾರೂ ಮಾತನಾಡಿಸುವುದಿಲ್ಲ ಎಂದು ತಿಳಿಸಿದರು.