ರಾಜಕೀಯ

ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಮಾತು ಸಿದ್ದರಾಮಯ್ಯರಿಗೆ ಸರಿಯಾಗಿ ಹೊಂದುತ್ತದೆ: ಬಿಜೆಪಿ ಟೀಕೆ

Manjula VN

ಬೆಂಗಳೂರು: ಬಿ.ಕೆ.​ಹ​ರಿ​ಪ್ರ​ಸಾದ್‌ ಎಲ್ಲೂ ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಹೀಗಾಗಿ ಅವರ ಹೇಳಿ​ಕೆಗೆ ನಾನು ಪ್ರತಿಕ್ರಿಯೆ ನೀಡಬೇಕಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ರಾಜ್ಯ ಬಿಜೆಪಿ ಭಾನುವಾರ ಟೀಕೆ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯದ ಕಾಂಗ್ರೆಸ್  ಸರ್ಕಾರದಲ್ಲಿ ಒಳಜಗಳ ನಿರಂತರವಾಗಿದೆ. "ಅ'ಹಿಂದ" ಹೆಸರಿನಲ್ಲಿ ಕೇವಲ ಒಂದೆರೆಡು ಸಮುದಾಯದವರನ್ನಷ್ಟೇ ಓಲೈಸುತ್ತಾ, ಉಳಿದೆಲ್ಲಾ ಸಮುದಾಯಗಳಿಗೂ ಅನ್ಯಾಯವೆಸಗುವ ಸಿದ್ದರಾಮಯ್ಯರವರ ನೈಜ ರಾಜಕಾರಣವನ್ನು ಅವರದೇ ಪಕ್ಷದ ನಾಯಕರು ತುಂಬಿದ ಸಭೆಯಲ್ಲಿ ಬಹಿರಂಗಪಡಿಸುತ್ತಿದ್ದಾರೆ. ಸಿದ್ದರಾಮಯ್ಯರವರ ಸರ್ಕಾರದ ಆಡಳಿತ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ, ಹರಿಪ್ರಸಾದ್‌ರವರಿಂದ ಹೊರಬಂದ ಸತ್ಯಗಳೇ ಸಾಕ್ಷಿ ಎಂದು ಹೇಳಿದೆ.

ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ" ಎಂಬ ಗಾದೆ ಮಾತಿದೆ. ಅದು ನಿಮಗೆ ಸರಿಯಾಗಿ ಹೊಂದುತ್ತದೆ ಸಿದ್ದರಾಮಯ್ಯ ಅವರೇ. ಹರಿಪ್ರಸಾದ್ ನನ್ನ ಹೆಸರೇ ಹೇಳಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡುತ್ತೀರಿ. ಹಾಗಾದರೆ, ಪಂಚೆ ಧರಿಸಿ, ದುಬಾರಿ ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡವರು ರಾಜ್ಯದಲ್ಲಿ ಬೇರೆ ಯಾರಾದರೂ ಇದ್ದಾರಾ..?...ಕೊರಟಗೆರೆಯಲ್ಲಿ ಪರಮೇಶ್ವರ್‌ರವರನ್ನು ಸೋಲಿಸಿದ್ದು ಯಾರು ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಎಂಬ ಉತ್ತರವನ್ನು ಕೊರಟಗೆರೆಯ ಚಿಕ್ಕ ಬಾಲಕ ಸಹ ಹೇಳುತ್ತಾನೆ.

ದೇವರಾಜ ಅರಸುರವರು ಬಳಸುತ್ತಿದ್ದ ಕಾರಿನಲ್ಲಿ ಜಾಲಿ ರೈಡ್‌ಗೆ ಹೋಗಿದ್ದು ರಾಹುಲ್ ಗಾಂಧಿಯವರಾ..? ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರು ನೀವೇ ತಾನೇ..? ವಂಧಿಮಾಗದರಿಂದ, ಆಸ್ಥಾನ ಕಲಾವಿದರಿಂದ ಸ್ವಯಂಘೋಷಿತ ಸ"ಮಜಾವಾದಿ" ಎಂಬ ಬಿರುದು ಪಡೆದವರು ನೀವೇ ತಾನೇ..? ಬಿ. ಕೆ. ಹರಿಪ್ರಸಾದ್‌ರವರು ಸಿದ್ದರಾಮಯ್ಯರವರನ್ನೇ ಉದ್ದೇಶಿಸಿ ಮಾತನಾಡಿದ್ದು ಎಂಬುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು ಎಂದು ಪ್ರಶ್ನಿಸಿದೆ.

SCROLL FOR NEXT