ರಾಜಕೀಯ

ಇನ್ನೂ ಮೂರು ಡಿಸಿಎಂ ಸ್ಥಾನಗಳ ಸೃಷ್ಟಿಸಿ: 'ಕೈ' ಪಾಳಯದಲ್ಲಿ ಸಂಚಲನ ಸೃಷ್ಟಿಸಿದ ಸಚಿವ ರಾಜಣ್ಣ ಹೇಳಿಕೆ!

Manjula VN

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರ ಬಹಿರಂಗ ಹೇಳಿಕೆಗಳು ರಾಜ್ಯ ಸರ್ಕಾರವನ್ನು ಮುಜುಗೊರಕ್ಕೊಳಗಾಗುವಂತೆ ಮಾಡುತ್ತಿದ್ದು, ಇದರ ನಡುವಲ್ಲೇ ಸಚಿವ ಕೆ.ಎನ್.ರಾಜಣ್ಣ ಅವರು ನೀಡಿರುವ ಹೇಳಿಕೆಯೊಂದು ಕೈ ಪಾಳಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ.

ಡಿ.ಕೆ. ಶಿವಕುಮಾರ್‌ ಜತೆಗೆ ಇನ್ನೂ ಮೂರು ಮಂದಿ ಉಪಮುಖ್ಯಮಂತ್ರಿಗಳನ್ನು ನೇಮಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡುತ್ತೇನೆಂದು ಸಚಿವ ರಾಜಣ್ಣ ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಇನ್ನೂ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಸಲಹೆ ನೀಡಲು ನಿರ್ಧರಿಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನ ಬರಲು ಎಸ್ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾತರು, ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿರುವುದು ಸಹ ಕಾರಣ. ಹೀಗಾಗಿ ಆ ಸಮುದಾಯಗಳಿಗೂ ಆದ್ಯತೆ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಪ್ರಸ್ತುತ ಹಿಂದುಳಿದ ವರ್ಗದ ಮುಖ್ಯಮಂತ್ರಿ (ಸಿದ್ದರಾಮಯ್ಯ), ಮುಂದುವರೆದ ವರ್ಗದ ಉಪಮುಖ್ಯಮಂತ್ರಿ (ಡಿ.ಕೆ. ಶಿವಕುಮಾರ್‌) ಇದ್ದಾರೆ. ಜೊತೆಗೆ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರು, ವೀರಶೈವರಿಗೂ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಈ ಬಗ್ಗೆ ಹೈಕಮಾಂಡ್‌ ಗಮನಕ್ಕೆ ತರಲು ನಿರ್ಧರಿಸಿದ್ದೇನೆ. ಈ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ. ಇನ್ನು ಮುಂದೆ ಪಕ್ಷದ ಹಿರಿಯ ನಾಯಕರೊಂದಿಗೂ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಜಾತಿವಾರು ಉಪಮುಖ್ಯಮಂತ್ರಿ ಹುದ್ದೆ ಕೋರುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಜಾತಿವಾರು ಹುದ್ದೆಯಲ್ಲ. ಎಸ್ಸಿ-ಎಸ್ಟಿ ಎಂದರೆ ಆ ಪ್ರವರ್ಗಗಳಲ್ಲಿ ನೂರಾರು ಜಾತಿಗಳಿವೆ. ಆ ಎಸ್ಸಿ-ಎಸ್ಟಿಯಲ್ಲಿ ಒಬ್ಬರಿಗೆ ಅವಕಾಶ ನೀಡಿ. ಅದೇ ರೀತಿ ಮೂರು ಉಪಮುಖ್ಯಮಂತ್ರಿ ಹುದ್ದೆ ಮಾಡಲಿ ಎಂಬುದು ನನ್ನ ಸಲಹೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಇಬ್ಬರು-ಮೂವರು ಉಪಮುಖ್ಯಮಂತ್ರಿ ಇರಲಿಲ್ಲವೇ? ನಮ್ಮಲ್ಲಿಯೂ ಇದ್ದರೆ ತಪ್ಪೇನು? ಇದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೆರವಾಗಲಿದೆ ಎಂದರು.

SCROLL FOR NEXT