ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ 
ರಾಜಕೀಯ

ಅಮಿತ್ ಶಾ ಭೇಟಿಗೆ ಸಿಗದ ಅವಕಾಶ: ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ- ಈಶ್ವರಪ್ಪ

Manjula VN

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮ್ಮ ಪುತ್ರನಿಗೆ ಅವಕಾಶ ಸಿಗದಿರುವುದಕ್ಕೆ ಅಸಮಾಧಾನಗೊಂಡು ಬಂಡಾಯ ಸಾರಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭೇಟಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರಾಕರಿಸಿದ್ದು, ಇದರೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದು ಖಚಿತ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.

ಬಿಜೆಪಿ ಹೈಕಮಾಂಡ್ ಅವರಲ್ಲಿ ಒಬ್ಬರಾದ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ತಮ್ಮ ಅಸಮಾಧಾನ ವ್ಯಕ್ತಪಡಿಸುವ ಉದ್ದೇಶದಿಂದ ಈಶ್ವರಪ್ಪ ಬುಧವಾರ ದೆಹಲಿಗೆ ತೆರಳಿದ್ದರು. ಆದರೆ, ಅಮಿತ್ ಶಾ ಭೇಟಿ ಮಾಡಲು ಸಾಧ್ಯವಾಗಿಲ್ಲ.

ಕೇಂದ್ರ ಸಚಿವರ ಜೊತೆ ಸಭೆ ಸಾಧ್ಯವಾಗದಿರುವುದಕ್ಕೆ ದೆಹಲಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಈಶ್ವರಪ್ಪ ಅವರು, ಬುಧವಾರ ರಾತ್ರಿ 10 ಗಂಟೆಯ ನಂತರ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ, ಅಮಿತ್ ಶಾ ಅವರು ಭೇಟಿಗೆ ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಲೋಕಸಭೆ ಚುನಾವಣೆಯಲ್ಲಿ ಸೋಲಲಿ ಎನ್ನುವ ಅಪೇಕ್ಷೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಇರಬಹುದು ಎಂದು ಆರೋಪಿಸಿದರು.

ಇದೇ ವೇಳೆ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದರು.

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರನ್ನು ಸೋಲಿಸಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕೈ ಬಲಪಡಿಸಲಾಗುವುದು. ಬಿಜೆಪಿ ಹೈಕಮಾಂಡ್, ತಾವು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಮತ್ತೆ ಮಾತುಕತೆಗೆ ಕರೆದರೆ ಹೋಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

SCROLL FOR NEXT