ಈಶ್ವರಪ್ಪ ಮತ್ತು ಅಮಿತ್ ಶಾ
ಈಶ್ವರಪ್ಪ ಮತ್ತು ಅಮಿತ್ ಶಾ 
ರಾಜಕೀಯ

ನನ್ನ ಭೇಟಿಗೆ ಅಮಿತ್ ಶಾ ನಿರಾಕರಿಸಿದ್ದಾರೆ, ಕೆಲವು ಪ್ರಶ್ನೆ ಕೇಳಿದ್ದರಿಂದ ಸಭೆ ನಡೆಯಲಿಲ್ಲ: ಈಶ್ವರಪ್ಪ

Lingaraj Badiger

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು, ತಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿಲ್ಲ ಎಂದು ಗುರುವಾರ ಹೇಳಿದ್ದಾರೆ.

ದೆಹಲಿಗೆ ಬರುವಂತೆ ಈಶ್ವರಪ್ಪಗೆ ಅಮಿತ್ ಶಾ ಬುಲಾವ್ ನೀಡಿದ್ದರು. ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಹೋಗಿದ್ದ ಈಶ್ವರಪ್ಪಗೆ ಭೇಟಿಗೆ ಸಮಯ ನೀಡಲಾಗಿಲ್ಲ. ಹೀಗಾಗಿ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.

"ಅಮಿತ್ ಶಾ ದೆಹಲಿಗೆ ಬರುವಂತೆ ಹೇಳಿದ್ದರು. ನಾನು ಅಲ್ಲಿಗೆ ಹೋಗದಿದ್ದರೆ ಅವರು ನನ್ನನ್ನು ದುರಹಂಕಾರಿ ಎಂದು ಕರೆಯುತ್ತಿದ್ದರು. ಹೀಗಾಗಿ ನಾನು ದೆಹಲಿ ಹೋದೆ. ನನಗೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಾನು ಕೆಲವು ಪ್ರಶ್ನೆಗಳನ್ನು ಕೇಳಿದ್ದರಿಂದ ಸಭೆ ನಡೆಯಲಿಲ್ಲ ಎಂದು ಭಾವಿಸುತ್ತೇನೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಕಷ್ಟಕರವಾಗಿತ್ತು" ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಇದರೊಂದಿಗೆ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ವಿರುದ್ಧ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.

"ಅಮಿತ್ ಶಾ ಅವರನ್ನು ಭೇಟಿಯಾಗಲು ಅವರ ಕಚೇರಿಗೆ ಹೋದೆ. ಆದರೆ ಅವರನ್ನು ಭೇಟಿಯಾಗಬೇಡಿ ಎಂದು ಹೇಳಿದ್ದಾರೆ. ಇದರಿಂದ ನನಗೆ ಒಳ್ಳೆಯದೇ ಆಗಿದೆ. ಏನಾದರೂ ಸಮಜಾಯಿಷಿ ನೀಡಿ ಕಣದಿಂದ ಹಿಂದೆ ಸರಿಯುವಂತೆ ಹೇಳಿದ್ದರೆ ನಾನೇನು ಮಾಡುತ್ತಿದ್ದೆ?" ಎಂದು ಈಶ್ವರಪ್ಪ ಅಚ್ಚರಿ ವ್ಯಕ್ತಪಡಿಸಿದರು.

ನಾನು ನ್ಯಾಯಕ್ಕಾಗಿ ಹೋರಾಡುತ್ತಿರುವುದರಿಂದ ನಾನು ಏನು ಮಾಡಿದರೂ ಅದು ಸಮರ್ಥನೀಯ ಎಂದು ಶಾ ಭಾವಿಸಿರಬೇಕು ಎಂದು ಹಿರಿಯ ಬಿಜೆಪಿ ನಾಯಕ ಹೇಳಿದ್ದಾರೆ.

ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದೆ. ಶಿವಮೊಗ್ಗದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ.

SCROLL FOR NEXT