ಎಸ್ ಟಿ ಸೋಮಶೇಖರ್
ಎಸ್ ಟಿ ಸೋಮಶೇಖರ್ 
ರಾಜಕೀಯ

ಕ್ಷೇತ್ರಕ್ಕೆ ಸಹಾಯ ಮಾಡುವವರ ಪರ ಪ್ರಚಾರ; ಪರೋಕ್ಷವಾಗಿ ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ ಎಸ್ ಟಿ ಸೋಮಶೇಖರ್

Lingaraj Badiger

ಬೆಂಗಳೂರು: ಬಿಜೆಪಿ ಬಂಡಾಯ ಶಾಸಕ ಎಸ್‌ಟಿ ಸೋಮಶೇಖರ್ ಅವರು ಶುಕ್ರವಾರ ತಮ್ಮ ಬೆಂಬಲಿಗರ ಸಭೆ ನಡೆಸಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂವಿ ರಾಜೇಗೌಡ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದು, ಇದಕ್ಕೆ ಕೇಸರಿ ಪಕ್ಷದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದಲ್ಲಿ ಬಿಜೆಪಿ ಶಾಸಕರು ನಡೆಸಿದ ಸಭೆಯ ಚಿತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ, ಸಚಿವ ಕೃಷ್ಣ ಬೈರೇಗೌಡ ಮತ್ತು ಇತರ ಕಾಂಗ್ರೆಸ್ ಮುಖಂಡರು ಕಾಣಿಸಿಕೊಂಡಿದ್ದು, ಅದನ್ನು ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು.

ಫೆಬ್ರವರಿ 27 ರಂದು ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು "ಆತ್ಮಸಾಕ್ಷಿ" ಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದು, ಕೇಸರಿ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು.

ಈಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಇದಕ್ಕೂ ಸಹ ಸೋಮಶೇಖರ್ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಜೆಪಿ ಮತ್ತು ಅದರ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಂದ ತಮಗೆ ಅವಮಾನವಾಗಿದೆ ಎಂದು ಹೇಳಿದ ಸೋಮಶೇಖರ್, ತಮ್ಮ ಬೆಂಬಲಿಗರು ಮತ್ತು ಜನ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವವರಿಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ಕ್ಷೇತ್ರಕ್ಕೆ ಸಹಾಯ ಮಾಡುವವರ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಇನ್ನು ಸೋಮಶೇಖರ್ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿದ ಕ್ರಮಕ್ಕೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, "ಎಸ್ ಟಿ ಸೋಮಶೇಖರ್ ಬಿಜೆಪಿಯಿಂದ ಹೊರಗೆ ಕಾಲಿಟ್ಟಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧವೂ ಮತ ಹಾಕಿದ್ದಾರೆ. ಹೀಗಾಗಿ ಅವರನ್ನು ಈಗ ನಮ್ಮ ಪಕ್ಷದ ಶಾಸಕ ಎಂದು ಕರೆಯಲು ಸಾಧ್ಯವಿಲ್ಲ" ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.

ಅವರನ್ನು ಪಕ್ಷದಿಂದ ಏಕೆ ಉಚ್ಚಾಟಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್, ''ರಾಜ್ಯ ಘಟಕಕ್ಕೆ ಶಾಸಕರನ್ನು ಉಚ್ಚಾಟಿಸುವ ಅಧಿಕಾರವಿಲ್ಲ. ಕೇಂದ್ರ ನಾಯಕರಿಗೆ ಮಾತ್ರ ಅಧಿಕಾರವಿದೆ. ಚುನಾವಣೆ ಮುಗಿಯಲಿ, ಕೇಂದ್ರ ನಾಯಕರು ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, 'ವಿನಾಶ ಕಾಲೆ ವಿಪರೀತ ಬುದ್ಧಿ'... ಮುಂದಿನ ದಿನಗಳಲ್ಲಿ ನಾವು(ಪಕ್ಷ) ನೋಡುತ್ತೇವೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ದೊಡ್ಡ ತಪ್ಪು ಮಾಡಿದ್ದಾರೆ ಮತ್ತು ಅದಕ್ಕೆ ಬೆಲೆ ತೆರುತ್ತಾರೆ ಎಂದರು.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದಕ್ಕಾಗಿ ಸೋಮಶೇಖರ್ ಅವರಿಗೆ ಈಗಾಗಲೇ ಪಕ್ಷದಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಅದಕ್ಕೆ ಅವರು 170 ಪುಟಗಳ ಉತ್ತರವನ್ನು ನೀಡಿದ್ದಾರೆ.

ಸಭೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ , ಕ್ಷೇತ್ರದಲ್ಲಿ ನನ್ನ ಆತ್ಮೀಯರೆಲ್ಲರ ಸಭೆ ಕರೆದು ಈವರೆಗಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಲೋಕಸಭೆ ಅಭ್ಯರ್ಥಿ ಘೋಷಣೆಯಾಗಿದೆ. ಅಭ್ಯರ್ಥಿ, ಏಳೆಂಟು ಬಾರಿ ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ. ಇಲ್ಲಿಯವರೆಗೆ ಅವರು ನನ್ನ ಬಳಿಗೆ ಬಂದಿಲ್ಲ ಮತ್ತು ನನ್ನ ಬೆಂಬಲವನ್ನು ಕೇಳಿಲ್ಲ. ಅವರು ಬೆಂಬಲ ಕೇಳದಿದ್ದರೆ ನಾನು ಏನು ಮಾಡಬೇಕು? ಎಂದರು.

ಕ್ಷೇತ್ರದ ಸಂಬಂಧಪಟ್ಟವರೆಲ್ಲರ ಜತೆ ಮಾತನಾಡಿದ್ದು, ನನ್ನ ನಡೆಗೆ ಯಾರೂ ವಿರೋಧಿಸಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ... ಕ್ಷೇತ್ರಕ್ಕೆ ಸಹಾಯ ಮಾಡುವವರಿಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ ಎಂದರು.

ಬಿಜೆಪಿ ತಮಗೆ ಮತ್ತೊಂದು ನೋಟಿಸ್ ಜಾರಿ ಮಾಡುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಅವರು ಏನು ಬೇಕಾದರೂ ನೀಡಲಿ, ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.

SCROLL FOR NEXT