ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ 
ರಾಜಕೀಯ

ನಟ ಪ್ರಕಾಶ್ ರಾಜ್- ಕಮಲ್ ಹಾಸನ್ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ: ಪ್ರಲ್ಹಾದ ಜೋಶಿ

Ramyashree GN

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ನಟರಾದ ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಅವರ ಅಭಿಪ್ರಾಯಗಳು ಮತ್ತು ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಮಂಗಳವಾರ ಹೇಳಿದ್ದಾರೆ.

ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಇಬ್ಬರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಇತ್ತೀಚಿಗೆ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ, 'ಆ ಹೇಳಿಕೆಗಳಲ್ಲಿ ಯಾವುದೇ ಸತ್ಯವಿಲ್ಲ' ಎಂದು ಹೇಳಿದರು.

ಬಿಜೆಪಿಯನ್ನು 'ಅಹಂಕಾರಿ' ಎಂದು ಕರೆದ ಪ್ರಕಾಶ್ ರಾಜ್, 'ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದೇ 400 ಸ್ಥಾನಗಳನ್ನು ಗೆಲ್ಲಲು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ' ಎಂದು ಇತ್ತೀಚೆಗೆ ಹೇಳಿದ್ದಾರೆ.

ಇನ್ನೊಂದೆಡೆ ತಮಿಳುನಾಡಿನ ಜನತೆ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಕಮಲ್ ಹಾಸನ್ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, 'ಅವರು ಮಾಡುವ ಆರೋಪಗಳಲ್ಲಿ ಕಿಂಚಿತ್ತಾದರೂ ಸತ್ಯಾಂಶವಿದ್ದರೆ ಇವತ್ತು ಬಿಜೆಪಿ 18 ರಾಜ್ಯಗಳಲ್ಲಿ ಸರ್ಕಾರ ನಡೆಸುವುದು ಸಾಧ್ಯವಾಗುತ್ತಿರಲಿಲ್ಲ. ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಅವರಿಗಾಗಲೀ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಿಲ್ಲ. ಅವರನ್ನು ಶೇಕಡ ಒಂದರಷ್ಟು ಮತದಾರರು ಸಹ ಬೆಂಬಲಿಸುವುದಿಲ್ಲ' ಎಂದಿದ್ದಾರೆ.

ಪ್ರಕಾಶ್ ಒಬ್ಬ ಅತೃಪ್ತ ಜೀವಿ. ರಾಜಕಾರಣದಲ್ಲಿ ಅವರ ಸ್ಥಾನಮಾನ ಏನು? ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ಅನ್ನು ಟೀಕಿಸಿದ ಕೇಂದ್ರ ಸಚಿವರು, 'ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರಿಗೆ ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. 75 ವರ್ಷಗಳ ಇತಿಹಾಸದಲ್ಲಿ ಅವರು ಮಹತ್ವದ ಅವಧಿಗೆ ಸರ್ಕಾರವನ್ನು ನಡೆಸಿದ್ದಾರೆ. ಆದರೆ, ಸಂಸತ್ತಿನ ಚುನಾವಣೆಯಲ್ಲಿ ಅರ್ಧಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಯಾಕೆ ಈ ಸ್ಥಿತಿ ಬಂದಿದೆ ಎನ್ನುವುದನ್ನು ಕಾಂಗ್ರೆಸ್ಸಿಗರು‌ ಮನವರಿಕೆ ಮಾಡಿಕೊಳ್ಳಬೇಕು. ಅವರು ಕೇವಲ‌ ಸನಾತನ ಧರ್ಮದ ವಿರುದ್ಧ ಹಿಂದುತ್ವದ ವಿರುದ್ಧ ಮಾತನಾಡುತ್ತಾರೆ ಎಂದರು.

SCROLL FOR NEXT