ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ  
ರಾಜಕೀಯ

ಮೋದಿ ರಾಜ್ಯ ಭೇಟಿಗೆ ನನ್ನ ತಕರಾರಿಲ್ಲ, ಆದರೆ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ತಿಳಿಸಲಿ: ಸಿಎಂ ಸಿದ್ದರಾಮಯ್ಯ

Manjula VN

ಬೆಂಗಳೂರು: ಮೋದಿಯವರು ರಾಜ್ಯಕ್ಕೆ ಬಂದು ಹೋಗಲು ನನ್ನದೇನೂ ತಕರಾರಿಲ್ಲ. ಆದರೆ, ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಹೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಪ್ರಚಾರಕ್ಕಾಗಿ ಮೈಸೂರಿಗೆ ಬರುತ್ತಿರುವುದಕ್ಕೆ‌ ನನ್ನ ಅಭ್ಯಂತರವೇನಿಲ್ಲ. ನಿರುದ್ಯೋಗ ನಿವಾರಣೆಗೆ ಏನು ಮಾಡಿದ್ದಾರೆ? ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ.‌ ಅದನ್ನು ಪರಿಹರಿಸಲು ಏನು ಮಾಡಿದ್ದಾರೆ? ಬರ ಪರಿಹಾರವನ್ನು ಈವರೆಗೂ ಕೊಟ್ಟಿಲ್ಲವೇಕೆ? ಎಂಬುದನ್ನೆಲ್ಲ ತಿಳಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯ ಇಲ್ಲ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಂಬೇಡ್ಕರ್ ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ. ಬಿಜೆಪಿ ಸಂವಿಧಾನದ ಪರವಾಗಿದೆ ಎಂಬುದು ಮೋದಿಯವರು ಮನಸಿನ ಮಾತಾಗಿದ್ದರೆ ಸಂವಿಧಾನ ಬದಲಿಸುತ್ತೇವೆ ಎಂದ ಅನಂತಕುಮಾರ್ ಹೆಗಡೆ ಮೇಲೆ ಕ್ರಮ ಯಾಕೆ ತೆಗೆದುಕೊಂಡಿಲ್ಲ? ಅವರನ್ನು ಪಕ್ಷದಿಂದ ಅಥವಾ ಮಂತ್ರಿ ಸ್ಥಾನದಿಂದ ಕೈಬಿಟ್ಟರೇ? ಉತ್ತರ ಕರ್ನಾಟಕದಲ್ಲಿ ಐದು ವರ್ಷಗಳಿಂದ ಏನೂ ಕೆಲಸ ಮಾಡದೇ ಮನೆಯಲ್ಲಿ ಕುಳಿತಿದ್ದರು. ಕೊನೆಯ 3-4 ತಿಂಗಳು ಬಂದು ಭಾಷಣ ಮಾಡಿದರು. ಟಿಕೆಟ್ ಕೊಟ್ಟರೆ ಸೋಲುತ್ತಾರೆ ಎಂಬ ವರದಿ ಬಂದಿದ್ದಕ್ಕೆ ಅನಂತಕುಮಾರ್ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಟೀಕಿಸಿದರು.

ಬಿಜೆಪಿ ಯಾವತ್ತೂ ಸಂವಿಧಾನದ ಪರವಾಗಿಲ್ಲ. ಸಂವಿಧಾನ ಜಾರಿಯಾದಾಗ ಸಾವರ್ಕರ್ ಹಾಗೂ ಗೋಲ್ವಾಲ್ಕರ್ ಅವರು ಸಂವಿಧಾನವನ್ನು ವಿರೋಧಿಸಿದ್ದರು. ಈ ಬಾರಿ ದೇಶದಲ್ಲಿ ಎನ್‌ಡಿಎಗೆ ಬಹುಮತ ಬರುವುದಿಲ್ಲ. ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗುವ ನಿರೀಕ್ಷೆ ಇದೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

NIA ಮತ್ತು ರಾಜ್ಯ ಪೊಲೀಸರಿಗೆ ಧನ್ಯವಾದ:

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ರಾಜ್ಯ ಪೊಲೀಸರಿಗೆ ಶನಿವಾರ ಧನ್ಯವಾದ ಅರ್ಪಿಸಿದ್ದಾರೆ.

“ನಾನು ಎನ್‌ಐಎ ಮತ್ತು ಕರ್ನಾಟಕ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ. ವಿಚಾರಣೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದರು.

ಅವರು ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಲು ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

SCROLL FOR NEXT