ಎಚ್‌ಡಿ ದೇವೇಗೌಡ
ಎಚ್‌ಡಿ ದೇವೇಗೌಡ 
ರಾಜಕೀಯ

ದೇವೇಗೌಡರು ಭಾಗವಹಿಸಿದ್ದ ಸಭೆಯಲ್ಲಿ ಭದ್ರತಾ ಲೋಪ: ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು, ಕ್ರಮಕ್ಕೆ ಆಗ್ರಹ

Lingaraj Badiger

ತುಮಕೂರು: ತುಮಕೂರಿನಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭದ್ರತಾ ಲೋಪವಾಗಿದೆ ಎಂದು ಆರೋಪಿಸಿ ಜೆಡಿಎಸ್‌ ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಮತ್ತು ಇದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದೆ.

ತುಮಕೂರಿನ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಜೆಡಿಎಸ್, ಏಪ್ರಿಲ್ 15 ರಂದು ಚುನಾವಣಾ ಆಯೋಗದ ಸೂಕ್ತ ಅನುಮತಿ ಪಡೆದು ಇಲ್ಲಿನ ಕುಂಚಿಟಿಗ ಸಮುದಾಯ ಭವನದಲ್ಲಿ ದೇವೇಗೌಡರ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಭೆ ನಡೆಸಲಾಗಿದೆ.

ಸೋಮಣ್ಣ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

“ಸಭೆಯ ಸ್ಥಳದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳು ಯಾವುದೇ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಮತ್ತು ಕಾಂಗ್ರೆಸ್ ಬೆಂಬಲಿಸುವ ಮಹಿಳೆಯರನ್ನು ಸಭಾಂಗಣದೊಳಗೆ ಬಿಟ್ಟಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದರಿಂದ ಯಾವುದೇ ವಿಚಾರಣೆ ಅಥವಾ ತಪಾಸಣೆ ಇಲ್ಲದೆ ದೇವೇಗೌಡರು ಇರುವ ಸ್ಥಳಕ್ಕೆ ಮಹಿಳೆಯರು ಬಂದರು’’ ಎಂದು ಪಕ್ಷ ಆರೋಪಿಸಿದೆ. ಅಲ್ಲದೆ ಘಟನೆಯ ಹಿಂದೆ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಮತ್ತು ಸಚಿವ ಕೆ ರಾಜಣ್ಣ ಅವರ ಕೈವಾಡವಿದೆ ಎಂದು ಜೆಡಿಎಸ್ ಆರೋಪಿಸಿದೆ.

ಭದ್ರತಾ ಲೋಪಕ್ಕೆ ಕಾರಣರಾದ "ಪೊಲೀಸ್ ಅಧಿಕಾರಿಗಳ" ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಅವರನ್ನು ಅಮಾನತುಗೊಳಿಸುವಂತೆ ಜೆಡಿಎಸ್, ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಸಭೆಗಳು ನಡೆದಾಗಲೂ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಪಕ್ಷ ಕೋರಿದೆ.

SCROLL FOR NEXT