ಡಿಸಿಎಂ ಡಿಕೆ ಶಿವಕುಮಾರ್ ಪ್ರಚಾರ
ಡಿಸಿಎಂ ಡಿಕೆ ಶಿವಕುಮಾರ್ ಪ್ರಚಾರ 
ರಾಜಕೀಯ

ಯಾರು ಏನೇ ಮಾತಾಡಲಿ; ನಾನು ಒಂದೇ ಒಂದು ರೂಪಾಯಿ ಲಂಚ ಯಾರಿಂದಲೂ ಪಡೆದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

Srinivasamurthy VN

ಕನಕಪುರ: ಯಾರು ಏನೇ ಮಾತಾಡಲಿ; ನಾನು ಒಂದೇ ಒಂದು ರೂಪಾಯಿ ಲಂಚ ಯಾರಿಂದಲೂ ಪಡೆದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕನಕಪುರ ತಾಲ್ಲೂಕಿನ ತುಂಗಣಿ, ಶಿವನಹಳ್ಳಿ ಸಾತನೂರು, ಕೋಡಿಹಳ್ಳಿ, ಹುಣಸನಹಳ್ಳಿ ಹಾಗೂ ತಮ್ಮ ಹುಟ್ಟೂರು ದೊಡ್ಡ ಆಲಹಳ್ಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, 'ನಮಗೆ ಕೆಟ್ಟ ಹೆಸರು ತರಬೇಕು, ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಲು ಬಿಜೆಪಿ ಐಟಿ ದಾಳಿ ಮಾಡಿಸುತ್ತಿದೆ.

ಬಿಜೆಪಿ ಹಾಗೂ ದಳದವರು ಯಾರೂ ಹಣವನ್ನು ಹಂಚುತ್ತಿಲ್ಲವೇ? ಅವರ ಮನೆಗಳ ಮೇಲೆ ಏಕೆ ದಾಳಿಯಾಗುತ್ತಿಲ್ಲ. ಅವರ ವಿಚಾರದಲ್ಲಿ ಐಟಿ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿದ್ದಾರೆ. ಯಾರ ಮನೆಗಳ ಮೇಲೆ ದಾಳಿ ನಡೆಯಬೇಕು ಎಂದು ಪಟ್ಟಿ ಮಾಡಿಕೊಂಡಿದ್ದಾರೆ.

ಬೇರೆ ಕಡೆಗಳಲ್ಲಿ ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕರೂ ಇದು ಡಿ.ಕೆ.ಶಿವಕುಮಾರ್ ಅವರ ಹಣವೆಂದು ಹೇಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.

ಅಂತೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ದಾಳಿ ಮಾಡುವ ಮೂಲಕ ಬೆದರಿಸುವ ಪ್ರಯತ್ನ ನಡೆಸುತ್ತಿದ್ದು, ಅವರ ಅಭ್ಯರ್ಥಿ ಸೋಲುತ್ತಾರೆ ಎಂಬ ಕಾರಣಕ್ಕೆ ಐಟಿ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಸಂಸದ ಸುರೇಶ್ ಅವರ ಚಾಲಕನ ಮನೆ ಮೇಲೆ ದಾಳಿ ಮಾಡಿ ಆತನ ಹೆಂಡತಿ ಜುಟ್ಟನ್ನು ಎಳೆದಾಡಿದ್ದು, ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ. ಐಟಿ ಅಧಿಕಾರಿಗಳಿಗೆ ಎಲ್ಲೂ ಹಣ ಸಿಕ್ಕಿಲ್ಲ. ಕೇವಲ ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಲು ಈ ರೀತಿ ದಾಳಿಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಜನ ನಮಗೆ ಬಹಳ ಪ್ರೀತಿ ವಿಶ್ವಾಸ ತೋರಿದ್ದಾರೆ. ಅವರ ಆಶೀರ್ವಾದದಿಂದ ಇಡೀ ರಾಜ್ಯದ ಜನಸೇವೆಯನ್ನು ಮಾಡುವ ಅವಕಾಶ ಸಿಕ್ಕಿದೆ. ಇಡೀ ಊರಿಗೆ ಊರೇ ಒಗ್ಗಟ್ಟಿನಿಂದ ಆಶೀರ್ವಾದ ಮಾಡುತ್ತಿದೆ. ಜನರಿಗೆ ನನ್ನ ಮೇಲೆ ನಂಬಿಕೆ ಇದ್ದು ಕ್ಷೇತ್ರ ಹಿಂದೆ ಹೇಗಿತ್ತು. ಈಗ ಯಾವ ರೀತಿ ಬದಲಾವಣೆ ಮಾಡಿದ್ದೇವೆ ಎಂದು ನಮ್ಮ ಜನರಿಗೆ ಗೊತ್ತಿದೆ.

ಅನೇಕ ಕಡೆಗಳಲ್ಲಿ ನಮ್ಮ ಆಸ್ತಿಗಳನ್ನು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ದಾನ ಮಾಡುವ ಮೂಲಕ ಬಿಟ್ಟುಕೊಟ್ಟಿದ್ದೇವೆ. ನಾವು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿಲ್ಲ ಎಂಬುದು ತಾಲೂಕಿನ ಜನರಿಗೆ ತಿಳಿದಿದೆ. ಬಿಜೆಪಿಯವರಾಗಲಿ, ಕುಮಾರಸ್ವಾಮಿ ಅವರಾಗಲಿ ಅವರ ಊರುಗಳಲ್ಲಿ ಇಂತಹ ಕೆಲಸ ಮಾಡಿದ್ದಾರಾ? ನಾವು ನಮ್ಮ ದೇಹ ಇರುವುದೇ ಜನರಿಗಾಗಿ. ನಾವು ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧವಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

2 ಕಣ್ಣುಗಳು ಎನ್ನುತ್ತಿದ್ದ ಮಹಾನುಭಾವರು ಮಂಡ್ಯಕ್ಕೆ ಹಾರಿದ್ದಾರೆ

ಇದೇ ವೇಳೆ ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ವಿರುದ್ಧವೂ ಕಿಡಿಕಾರಿದ ಡಿಕೆ ಶಿವಕುಮಾರ್, 'ಐದು ವರ್ಷಕ್ಕೊಮ್ಮೆ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಕನಕಪುರದಲ್ಲಿ ಪ್ರವಾಸ ಮಾಡಿ ಹೋಗ್ತಾರೆ.

ಅವರು ಎಷ್ಟು ಸಾರಿ ಬೇಕಾದರು ಬಂದು ಹೋಗಲಿ ನನ್ನದೇನು ಅಭ್ಯಂತರವಿಲ್ಲ. ನಾವು ಮಾತ್ರ ಅವರಂತಲ್ಲ. ಈ ತಾಲೂಕಿನ ಜನರ ಮಕ್ಕಳಾಗಿರುವ ನಮ್ಮ ಬದುಕು, ಜೀವನ, ಪಲ್ಲಕ್ಕಿ, ಕೊನೆಗೆ ಹೆಣ ಎಲ್ಲವೂ ಇದೇ ಮಣ್ಣಿನಲ್ಲಿ ಅಡಗಿದೆ. ಐದು ವರ್ಷಗಳ ಹಿಂದೆ ಹಲವು ನಾಯಕರ ವಿರೋಧದ ನಡುವೆಯೂ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು.

ನಾನು ಅವರ ಬೆನ್ನಿಗೆ ಚೂರಿಯನ್ನು ಹಾಕಿದ್ದೇನಂತೆ, ನಾನು ಕಲ್ಲು ಹೊಡೆದು ಲೂಟಿ ಮಾಡಿದ್ದೇನಂತೆ. ನನ್ನ 16 ಎಕರೆ ಜಮೀನಿನಲ್ಲಿ ಕಲ್ಲು ಹೊಡೆದಿದ್ದೇನೆಯೇ ಹೊರತು ಬೇರೆಯವರ ಅಥವಾ ಸರ್ಕಾರಿ ಜಮೀನಿನಲ್ಲಿ ಕಲ್ಲು ಹೊಡೆದಿಲ್ಲ. ಒಂದೇ ಒಂದು ರುಪಾಯಿ ಲಂಚ ಯಾರಿಂದಲೂ ಪಡೆದಿಲ್ಲ. ಯಾರು ಏನು ಬೇಕಾದರೂ ಮಾತನಾಡಲಿ, ನೀವು ನನ್ನ ಬೆಂಬಲಕ್ಕೆ ಇದ್ದರೆ ಸಾಕು ಎಂದರು.

ಅಲ್ಲದೆ ಕನಕಪುರ ಮತ್ತು ರಾಮನಗರ ನನ್ನ ಎರಡು ಕಣ್ಣು ಎನ್ನುತ್ತಿದ್ದ ಮಹಾನುಭಾವರು ಈಗ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮೊಮ್ಮಗ ಹಾಸನದಲ್ಲಿ, ಅಳಿಯ ಇಲ್ಲಿ ಸ್ಪರ್ಧಿಸಿದ್ದಾರೆ. ಹೀಗಾದರೆ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು.

ಕೇವಲ ಅವರ ಕುಟುಂಬಕ್ಕೆ ದುಡಿಯಲು ಕಾರ್ಯಕರ್ತರು ಇರಬೇಕೆ ಎಂಬುದನ್ನು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯೋಚಿಸಬೇಕು ಎಂದು ಪರೋಕ್ಷ ವಾಗಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಬಿಜೆಪಿಗೆ ಮತ ಹಾಕಿದವರಿಗೂ ಸೇರಿ ಪಕ್ಷಾತೀತವಾಗಿ ಯೋಜನೆ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಕುಮಾರಸ್ವಾಮಿ, ಮೋದಿ ಎಲ್ಲಾ ಬೊಬ್ಬೆ ಹಾಕುತ್ತಿದ್ದರು. ಆದರೀಗ ಅವರೇ ಮೋದಿ ಗ್ಯಾರಂಟಿ ಎಂದು ಹೆಸರು ಹಾಕಿಕೊಳ್ಳುತ್ತಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಕೊಡಲಿದ್ದು ಕೆಲಸ ಇಲ್ಲದ ಯುವಕರಿಗೆ 1 ಲಕ್ಷ, 25 ಲಕ್ಷ ಆರೋಗ್ಯ ಮಿಮೆ ಹಾಗೂ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.

SCROLL FOR NEXT