ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದರೂ ತಾನು ವಿಚಲಿತನಾಗಿಲ್ಲ. ರಾಜಕೀಯ ಹೋರಾಟ ವೇಳೆ ನನ್ನಗೆ ಜೋಶ್ ಮತ್ತಷ್ಟು ಹೆಚ್ಚುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ, "ನನ್ನ ಆತ್ಮಸಾಕ್ಷಿ ತುಂಬಾ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತಮ್ಮ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ವಾದಿಸುತ್ತಾರೆ ಎಂದು ತಿಳಿಸಿದರು.
"ನನಗೆ ನ್ಯಾಯಾಂಗದ ಮೇಲೆ ಅಪಾರ ನಂಬಿಕೆಯಿದೆ. ನಾನು ಯಾವುದೇ ತಪ್ಪು ಮಾಡಿಲ್ಲದ ಕಾರಣ ನ್ಯಾಯಾಲಯದಿಂದ ಪರಿಹಾರ ಪಡೆಯುವ ಸಂಪೂರ್ಣ ವಿಶ್ವಾಸವಿದೆ. 40 ವರ್ಷಗಳ ಹಿಂದೆ ಆಗಸ್ಟ್ 17, 1984 ರಂದು ಮೊದಲ ಬಾರಿಗೆ ಮಂತ್ರಿಯಾಗಿದ್ದೆ. ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಾಗಿದೆ, ನಾನು ಯಾವುದೇ ತಪ್ಪು ಮಾಡಿಲ್ಲ, ಯಾವುದೇ ತಪ್ಪು ಮಾಡುವುದಿಲ್ಲ, ರಾಜಭವನ ಬಳಸಿಕೊಂಡು ಬಿಜೆಪಿ ಮತ್ತು ಜೆಡಿಎಸ್ ನನ್ನ ಪ್ರತಿಷ್ಠೆಯನ್ನು ಹಾಳುಮಾಡಲು ಷಡ್ಯಂತ್ರ ರೂಪಿಸಿವೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ರಾಜಕೀಯ ಪ್ರೇರಿತವಾಗಿದೆ. ರಾಜಕೀಯ, ಕಾನೂನುಬದ್ಧವಾಗಿ ಅದನ್ನು ಎದುರಿಸುತ್ತೇನೆ. ನಾವು ಕಾನೂನು ಮತ್ತು ರಾಜಕೀಯ ಹೋರಾಟ ಮಾಡುತ್ತೇವೆ. ರಾಜಕೀಯ ಹೋರಾಟದ ಸಮಯದಲ್ಲಿ ನನಗೆ ಮತ್ತಷ್ಟು ಜೋಶ್ ಹೆಚ್ಚುತ್ತದೆ. ಅದನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ. ಅದನ್ನು ಹಿಂದೆ ಮಾಡಿದ್ದೇನೆ, ಈಗ ಮಾಡುತ್ತಿದ್ದೇನೆ ಮತ್ತು ಮುಂದೆಯೂ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
ನನ್ನನ್ನು ರಾಜಕೀಯವಾಗಿ ಮುಗಿಸಿದರೆ ಇಡೀ ಕಾಂಗ್ರೆಸ್ ಪಕ್ಷವನ್ನು ಮುಗಿಸಿ ಬಿಡಬಹುದು ಎಂಬ ಭ್ರಮೆಯಲ್ಲಿ ವಿಪಕ್ಷಗಳಿದ್ದಾರೆ. ಅವರ ರಾಜಕೀಯ ಆಟದ ಯೋಜನೆ ಸಾಕಾರಗೊಳ್ಳುವುದಿಲ್ಲ ಎಂದರು.