ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ 
ರಾಜಕೀಯ

ಮುಡಾ ಹಗರಣ: ಗಮನ ಬೇರೆಡೆಗೆ ಸೆಳೆಯುವ ಹುನ್ನಾರ, ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಮಿಸ್ಟರ್ ಸಿದ್ದರಾಮಯ್ಯ.. ನಾನು ಕಾನೂನು ಪಂಡಿತ, ವಕೀಲ ಎನ್ನುತ್ತೀರಿ. 2011ರಲ್ಲಿ ಸುಪ್ರೀಂ ಕೋರ್ಟ್ SITಗೆ ಕೊಟ್ಟ ಆದೇಶವೇನು ಎಂದು ನಿಮಗೆ ಗೊತ್ತಿಲ್ಲವೇ?

ಬೆಂಗಳೂರು: ನನ್ನ ವಿರುದ್ಧ ಆರೋಪ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಿಂದ ಗಮನ ಬೇರೆಡೆಗೆ ಸೆಳೆಯುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಗುರುವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುಧೀರ್ಘ ಫೋಸ್ಟ್ ಮಾಡಿರುವ ಕುಮಾರಸ್ವಾಮಿ, ಸಿದ್ದಕರ್ಮಿ ಸಿದ್ದರಾಮಯ್ಯ ಅವರೇ, ನಿಮ್ಮ ವಿರುದ್ಧ ಬಂದ ಮುಡಾ ಕೊಚ್ಚೆಯ ಗಮನ ಬೇರೆಡೆಗೆ ಸೆಳೆಯುವ ಹುನ್ನಾರ ಅರ್ಥವಾಗುತ್ತದೆ.

ಹೇಗಾದರೂ ಅಧಿಕಾರದಲ್ಲೇ ಉಳಿದು ಲೂಟಿ ಹೊಡೆಯಬೇಕೆನ್ನುವ ಧನದಾಹದ ಹಪಾಹಪಿಯನ್ನೂ ಅರ್ಥ ಮಾಡಿಕೊಳ್ಳಬಲ್ಲೆ. ಕಳ್ಳನ ಜಾಗದಲ್ಲಿ ನಿಂತು ಊರಿಗೆಲ್ಲ ಗೀತೆ ಬೋಧಿಸುವ ನಿಮ್ಮ ಪ್ರಾರಬ್ಧ ಎಂಥಾ ಕೀಳುಮಟ್ಟಕ್ಕೆ ಇಳಿದಿದೆ ಎನ್ನುವುದನ್ನೂ ಅರ್ಥ ಮಾಡಿಕೊಂಡಿದ್ದೇನೆ. ಎಷ್ಟೇ ಆದರೂ ನೀವು ಸಕಲ ಕಲೆಗಳ ಸಿದ್ದಕರ್ಮಿ, ಇಂಥ ಗಲೀಜು ಕೆಲಸ ನಿಮಗೆ ಬೆಣ್ಣೆಯಿಂದ ಬಂದ ವಿದ್ಯೆ! ಎಂದು ಕಿಡಿಕಾರಿದ್ದಾರೆ.

ಸಾಯಿ ವೆಂಕಟೇಶ್ವರಕ್ಕೆ 550 ಎಕರೆ ಮಂಜೂರು ಮಾಡಿದ್ದೇನೆ ಎಂದು ಬೊಗಳೆ ಬಿಟ್ಟಿದ್ದೀರಿ. ನನ್ನ ಬರವಣಿಗೆ ಪೋರ್ಜರಿ ಆಗಿದೆ. ಪತ್ರಿಕೆಗಳ ವರದಿಗೆ ಉತ್ತರ ಕೊಡುತ್ತೇನೆ, ಪಲಾಯನ ನನ್ನ ಜಾಯಮಾನವಲ್ಲ. ಆದರೆ, ಆ ವರದಿಯನ್ನೇ ನೆತ್ತಿ ಮೇಲಿಟ್ಟುಕೊಂಡು ಉಪ್ಪಿನಕಾಯಿ ಚಪ್ಪರಿಸುವ ದೈನೇಸಿ ಸ್ಥಿತಿ ನಿಮಗೇಕೆ? 40 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲವೆನ್ನುವ ನೀವು, ವೈಟ್ನರ್ ಉಜ್ಜಿ ಕಪ್ಪುಚುಕ್ಕೆ ತೆಗೆಯುವ ವ್ಯರ್ಥ ಪ್ರಯತ್ನ ಮಾಡಿದ್ದೇಕೆ? Kappu chukke removed from whitener!! ಎಂದು ಬರೆದುಕೊಂಡಿದ್ದಾರೆ.

ಮುಡಾದಲ್ಲಿ ನಿಮ್ಮ ಸಕುಟುಂಬ ಪರಿವಾರ ಸರಕಾರಿ ಭೂಮಿಯನ್ನು ಹೇಗೆಲ್ಲಾ ಮುಕ್ಕಿತು ಎನ್ನುವುದಕ್ಕೆ ದಂಡಿದಂಡಿ ದಾಖಲೆಗಳೇ ಇವೆ. ನಿಮ್ಮ ಪಟಾಲಂ ಹೆಲಿಕಾಪ್ಟರ್ ನಲ್ಲಿ ಕದ್ದು ಸಾಗಿಸಿದ ದಾಖಲೆಗಳು ಸುಳ್ಳಾ? ಕಪ್ಪುಚುಕ್ಕೆಯನ್ನು ನಿಮ್ಮ ವೈಟ್ನರ್ ಅಳಿಸೀತಾ ಸಿದ್ದರಾಮಯ್ಯನವರೇ? ನನ್ನ ಸಹಿ ಇಲ್ಲ, ಟಿಪ್ಪಣಿಯೂ ಇಲ್ಲ ಅಂತೀರಿ. ಅಪ್ಪಣೆಯನ್ನಷ್ಟೇ ಕೊಟ್ಟಿದ್ದೀರಿ! 14 ಸೈಟಿಗೆ ರೂ. 62 ಕೋಟಿ ಪರಿಹಾರ ಕೇಳಲು ಹೇಳಿದ್ದು ಯಾವ ಟಿಪ್ಪಣಿ? ನಿಮ್ಮದು ನಾಲಿಗೆಯೋ.. ಇನ್ನೇನೋ.. ಆಚಾರವಿಲ್ಲದ ನಾಲಿಗೆ ನನ್ನ ತಟ್ಟೆಯತ್ತ ಚಾಚಿದೆ... ಸತ್ತ ಜೀವದ ರುಚಿ ನೆಕ್ಕಲು ಎಂದು ಟೀಕಿಸಿದ್ದಾರೆ.

ಮಿಸ್ಟರ್ ಸಿದ್ದರಾಮಯ್ಯ.. ನಾನು ಕಾನೂನು ಪಂಡಿತ, ವಕೀಲ ಎನ್ನುತ್ತೀರಿ. 2011ರಲ್ಲಿ ಸುಪ್ರೀಂ ಕೋರ್ಟ್ SITಗೆ ಕೊಟ್ಟ ಆದೇಶವೇನು ಎಂದು ನಿಮಗೆ ಗೊತ್ತಿಲ್ಲವೇ? ನಾನು ವಕೀಲ.. ನಾನು ವಕೀಲ.. ಎಂದು ಪದೇಪದೆ ಹೇಳಬೇಡಿ ಎಂದು ಹಿಂದೆಯೇ ಸಲಹೆ ಮಾಡಿದ್ದೆ. ಬುದ್ಧಿಗೇಡಿಗಳಿಗೆ ಬುದ್ಧಿವಾದ ರುಚಿಸದು. ರಾಜ್ಯಪಾಲರಿಗೆ SIT ಬರೆದ ಪತ್ರ ಇಟ್ಟುಕೊಂಡು ಹಾರಾಟ ಮಾಡುತ್ತಿದ್ದೀರಿ. ಪತಂಗದ ಹಾರಾಟ ನೋಡಲಿಕ್ಕೆ ಚೆಂದ, ಕೆಳಗಿರುವ ಬೆಂಕಿಜ್ವಾಲೆ ಅದಕ್ಕೆ ಅರಿವಿರುವುದಿಲ್ಲ. ನಿಮ್ಮ ಬಗ್ಗೆ ಕನಿಕರವಿದೆ. ನಿಮ್ಮ ಆನಂದ ತಾತ್ಕಾಲಿಕ ಅಷ್ಟೇ ಎಂದಿದ್ದಾರೆ.

ಸುತ್ತಲೂ ಪಟಾಲಂ ಕಟ್ಟಿಕೊಂಡು, ಹೈಕಮಾಂಡ್ ಅನ್ನೇ ಕಾಲಕಸ ಮಾಡಿಕೊಂಡು, ನಂಬಿ ಕೈಹಿಡಿದವರ ಬೆನ್ನಿಗೆ ಚೂರಿ ಹಾಕಿ ಕುರ್ಚಿಗಾಗಿ ಪಾಲಿಟಿಕ್ಸ್ ಮಾಡುವ ದಿಕ್ಕೆಟ್ಟ ದುಸ್ಥಿತಿ ನನಗಿಲ್ಲ. ನನ್ನ ರಾಜಕಾರಣ ಹಣಕ್ಕೆ, ಅಧಿಕಾರಕ್ಕೆ ಅಲ್ಲ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನಾನು ನಾನೇ... 'ಸೋತರೆ ಸೋಲಬೇಕು ಬಾಹುಬಲಿಯಂತೆ..' ಆ ಮಹಾನ್ ವಿರಾಗಿಯೇ ನನ್ನ ಆದರ್ಶ. 20 ತಿಂಗಳ ಅಧಿಕಾರ,14 ತಿಂಗಳ ಸರಕಾರ ತ್ಯಜಿಸುವಾಗಲೂ ನಾನು ನಿರ್ಭಾವುಕ. ಇದು ನಿಮಗೆ ಸಾಧ್ಯವೇ?ಎಂದು ಪ್ರಶ್ನಿಸಿದ್ದು, ಪ್ರಧಾನಮಂತ್ರಿಗಳ ರಕ್ಷಣೆ ಪಡೆದುಕೊಳ್ಳುವ, ಅವರ ಗೌರವಕ್ಕೆ ಧಕ್ಕೆ ತರುವ ಕೆಲಸ ನಾನೆಂದೂ ಮಾಡಲಾರೆ. ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುವುದೂ ಗೊತ್ತು. ನಿಮ್ಮ ದುಷ್ಟತನದ ಭಕ್ಷಣೆಯೂ ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ನನ್ನ ಪುರಾಣ ಕಂತುಗಳಲ್ಲಿ ಬರುತ್ತದೆ ಎನ್ನುವ ಸಿದ್ದರಾಮಯ್ಯನವರೇ.. ನಿಮ್ಮ ಹೆಣೆಬರಹ ನಿರ್ಧರಿಸುವ ನೂರಾರು ಪುರಾಣಗಳು ನನ್ನಲ್ಲಿವೆ. ಸಾವಿರಾರು ಚಾಪ್ಟರುಗಳ ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡಬಹುದು. ಬೇಲಿಕೇರಿಯಲ್ಲಿ ಅದಿರು ಕದ್ದ ಅಸಾಮಿಗಳ ಜೊತೆಗೆ 'ಸಿದ್ಧಹಸ್ತ' ಶಾಮೀಲಾಗಿರುವ ಗಣಿಪುರಾಣ ಬಿಚ್ಚಿದರೆ ನಿಮ್ಮ ಮನೆಯ ಮುಂದೆ ಕಾನ್ಸ್ ಟೇಬಲ್ ಗಳು ಸಾಲುಗಟ್ಟಬೇಕಾಗುತ್ತದೆ. ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT