ರಾಜಕೀಯ

ಎಲ್ ಕೆ ಅಡ್ವಾಣಿಗೆ ಭಾರತ ರತ್ನ: ಪಕ್ಷಬೇಧ ಮರೆತು ಕೇಂದ್ರದ ನಿರ್ಧಾರ ಶ್ಲಾಘಿಸಿದ ರಾಜಕೀಯ ನಾಯಕರು

Lingaraj Badiger

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಘೋಷಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕದ ಹಲವು ರಾಜಕೀಯ ನಾಯಕರು ಪಕ್ಷಬೇಧ ಮರೆತು ಸ್ವಾಗತಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ಮಾಜಿ ಸಿಎಂ, ಬಿಜೆಪಿ ವರಿಷ್ಠ ಬಿಎಸ್ ಯಡಿಯೂರಪ್ಪ ಅವರು ಶ್ಲಾಘಿಸಿದ್ದಾರೆ.

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದಕ್ಕೆ ಲಾಲ್ ಕೃಷ್ಣ ಅಡ್ವಾಣಿಯೇ ಕಾರಣ. ಬಾಬರಿ ಮಸೀದಿ ಧ್ವಂಸವಾದಾಗ ಅಡ್ವಾಣಿ ಇದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವುದಾಗಿ ಘೋಷಿಸಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿಯ ಹಿರಿಯ ನಾಯಕ ಅಡ್ವಾಣಿಗೆ ಶುಭಾಶಯ ಕೋರಿದ್ದಾರೆ.

'ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ 'ಭಾರತ ರತ್ನ' ಪುರಸ್ಕಾರಕ್ಕೆ ಭಾಜನರಾದ ಹಿರಿಯ ರಾಜಕಾರಣಿ, ಬಿಜೆಪಿ ದಿಗ್ಗಜ ಹಾಗೂ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಕುಮಾರಸ್ವಾಮಿ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಇಂತಹ ಉನ್ನತ ಮಟ್ಟದ ನಾಯಕನಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು. ಅಡ್ವಾಣಿ ಭಾರತೀಯ ರಾಜಕೀಯದಲ್ಲಿ ನಿಷ್ಠೆ, ಬದ್ಧತೆ, ಸ್ನೇಹಪರತೆ ಮತ್ತು ಕಠಿಣ ಪರಿಶ್ರಮದ ನಾಯಕರಾಗಿದ್ದು, ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ನಾನು ಅವರಿಗೆ ಶುಭ ಹಾರೈಸುತ್ತೇನೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಉಡುಪಿಯ ಪೇಜಾವರ ಮಠದ ಪೀಠಾಧಿಪತಿ ವಿಶ್ವ ಪ್ರಸನ್ನ ತೀರ್ಥರು ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ. ಅಡ್ವಾಣಿ ಅವರು ತಾವು ನಿರ್ವಹಿಸಿದ ಕಚೇರಿಗಳ ಘನತೆಯನ್ನು ಎತ್ತಿಹಿಡಿದ ಮೌಲ್ಯಾಧಾರಿತ ರಾಜಕಾರಣದ ಎಂದಿದ್ದಾರೆ.

ಎಲ್‌ ಕೆ ಅಡ್ವಾಣಿ ಅವರಿಗೆ ‘ಭಾರತ ರತ್ನ’ ಕೊಡಲಿ ಬಿಡಿ, ಪಾಪ ಬೇಡ ಎಂದವರು ಯಾರು? ನಾವು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಿ ಎಂದು ಪತ್ರ ಬರೆದಿದ್ದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇನ್ನು ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿದ ಬಗ್ಗೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಅಡ್ವಾಣಿಯವರು ದೇಶದ ಹಿರಿಯ ರಾಜಕಾರಣಿ. ಅವರಿಗೆ ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರೇನೂ ಇಲ್ಲ. ಆದರೆ ತ್ರಿವಿಧ ದಾಸೋಹಿ, ಶತಾಯುಷಿ, ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಎಂದು ಆಗ್ರಹಿಸಿದರು. 

SCROLL FOR NEXT