ವಿಜಯೇಂದ್ರ
ವಿಜಯೇಂದ್ರ 
ರಾಜಕೀಯ

'ದೇವಾಲಯಗಳಿಗೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಟ್ಟು ಬಿಡಿ: ದಾನಿಗಳು ಅಲ್ಲೇ ಬಂದು ದಾನ ಮಾಡ್ತಾರೆ'

Shilpa D

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ಶ್ರೀಮಂತ ದೇವಾಲಯಕ್ಕೆ ಸರಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ. ದಾನಿಗಳು ಅಲ್ಲೇ ಬಂದು ದಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನವನ್ನೂ ಸರ್ಕಾರ ಕೊಡುತ್ತಿಲ್ಲ. ರಾಜ್ಯದ ಹಣೆಬರಹ ಏನಾಗುತ್ತಿದೆ ನೋಡಿ ಎಂದರು. ಈ ಸರ್ಕಾರದ ದುರಾಡಳಿತದಿಂದಾಗಿ ಸರ್ಕಾರಿ ನೌಕರರಿಗೆ ಸಂಬಳವನ್ನೂ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ' ಎಂದು ಆರೋಪಿಸಿದರು.

ನಾಡಗೀತೆ ವಿಚಾರದಲ್ಲಿ ಸರ್ಕಾರ ಎಡವಟ್ಟುಗಳನ್ನು ಮಾಡಿದೆ. ಈ ಸರ್ಕಾರದ ಕಾರ್ಯಸೂಚಿ ಏನು ಎಂಬುದು ಈ ಆದೇಶಗಳಿಂದ ಗೊತ್ತಾಗುತ್ತದೆ. ಕನ್ನಡ ವಿರೋಧಿ ಚಿಂತನೆಯಲ್ಲಿದೆ. ಕನ್ನಡ ನಾಡು - ನುಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ. ಅದೇ ಭ್ರಮೆಯಲ್ಲೇ ಮುಖ್ಯಮಂತ್ರಿಯೂ ಇದ್ದಾರೆ. ಹೀಗಾಗಿಯೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಆತಂಕದಲ್ಲಿದೆ. ಆದ್ದರಿಂದಲೇ ದೆಹಲಿ ಚಲೋ ಮೊದಲಾದ ನಾಟಕ ಮಾಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿದೆ ಎಂದು ಟೀಕಿಸಿದರು.

SCROLL FOR NEXT