ಬಿಜೆಪಿ 
ರಾಜಕೀಯ

ಪಾಕಿಸ್ತಾನ ಬಿಜೆಪಿಗೆ ಶತ್ರುದೇಶ, ನಮಗಲ್ಲ ಹೇಳಿಕೆ: ಬಿ.ಕೆ. ಹರಿಪ್ರಸಾದ್ ವಿರುದ್ಧ ಬಿಜೆಪಿ ವಾಗ್ದಾಳಿ

ಪಾಕಿಸ್ತಾನ ಬಿಜೆಪಿಗೆ ಶತ್ರುದೇಶ, ನಮಗಲ್ಲ ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ಬೆಂಗಳೂರು: ಪಾಕಿಸ್ತಾನ ಬಿಜೆಪಿಗೆ ಶತ್ರುದೇಶ, ನಮಗಲ್ಲ ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಪಾಕಿಸ್ಥಾನದ ಬಗ್ಗೆ ಕಾಂಗ್ರೆಸ್‌ ಒಲವು ಮತ್ತು ನಿಲುವು ಏನು ಎಂಬುದನ್ನು ಬಿ. ಕೆ. ಹರಿಪ್ರಸಾದ್‌ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಪಾಲಿಗಷ್ಟೇ ಪಾಕಿಸ್ಥಾನ ಶತ್ರುರಾಷ್ಟ್ರ, ಕಾಂಗ್ರೆಸ್ ಪಾಲಿಗೆ ಪಾಕಿಸ್ಥಾನ ನೆರೆಯ ರಾಷ್ಟ್ರ ಎಂಬ ಮೂಲಕ ಜವಾಹರಲಾಲ್‌ ನೆಹರೂ - ಮೊಹಮ್ಮದ್‌ ಆಲಿ ಜಿನ್ನಾ ಅವರ ಆಪ್ತ ಸಂಬಂಧ ಈಗಿನ ತಲೆಮಾರಿಗೂ ಮುಂದುವರಿದಿರುವುದನ್ನು ಸ್ಪಷ್ಟಪಡಿಸಿದ್ದಾರೆಂದು ಹೇಳಿದೆ.

ವಿಧಾನಸೌಧದಲ್ಲೇ ಪಾಕಿಸ್ಥಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದವರ ಪರ ನಿಂತಿರುವುದೂ ಅಲ್ಲದೆ ನಾಲ್ಕು ಬಾರಿ ಭಾರತದ ಮೇಲೆ ಯುದ್ಧ ಸಾರಿದ ಪಾಕಿಸ್ಥಾನವನ್ನು ಶತ್ರುರಾಷ್ಟ್ರವಲ್ಲ ಎನ್ನುವ ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ನಿಂದಿಸಹೊರಟರೆ ಪದಗಳ ಅಭಾವವೇ ಉಂಟಾಗುತ್ತದೆ. ಹರಿಪ್ರಸಾದ್ ಅವರಂಥ ದೇಶವಿರೋಧಿ ಮನಸ್ಥಿತಿಗಳು ಕಾಂಗ್ರೆಸ್‌ನ ಎಲ್ಲಾ ಹಂತಗಳಲ್ಲೂ ಹಾಸುಹೊಕ್ಕಾಗಿದೆ ಎಂದು ತಿಳಿಸಿದೆ.

ಈ ನಡುವೆ ಹರಿಪ್ರಸಾದ್ ಅವರ ವಿರುದ್ಧ ಶೋಭಾ ಕರಂದ್ಲಾಜೆಯವರೂ ಕೂಡ ವಾಗ್ದಾಳಿ ನಡೆಸಿದ್ದು, ಹರಿಪ್ರಸಾದ್ ಅವರ ಈ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬದಲಾಗಿದೆ ಎಂದು ಹೇಳಿದ್ದಾರೆ.

ಶತ್ರು ರಾಷ್ಟ್ರ ಪಾಕಿಸ್ತಾನವು ಭಾರತದ ವಿರುದ್ಧ 4 ಯುದ್ಧಗಳನ್ನು ಮಾಡಿದೆ. ಕದನ ವಿರಾಮ ಉಲ್ಲಂಘನೆಯಲ್ಲಿ ಸದಾ ತೊಡಗಿಕೊಂಡಿದ್ದು, ನಮ್ಮ ಯೋಧರ ಮೇಲೆ ದಾಳಿ ನಡೆಸುತ್ತಿದೆ. ಕಾಶ್ಮೀರ ವಿಚಾರದಲ್ಲಿ ಪಟ್ಟುಬಿಡದೆ ಹಟ ಸಾಧಿಸುತ್ತಿದೆ. ಭಯೋತ್ಪಾದನೆಗೆ ನಿರಂತರವಾಗಿ ಕುಮ್ಮಕ್ಕು ನೀಡುತ್ತಿದೆ. ಇಷ್ಟಾಗಿಯೂ ಬಿಕೆ ಹರಿಪ್ರಸಾದ್ ಅವರು ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಪರಿಗಣಿಸುವುದಿಲ್ಲ. ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಒಪ್ಪಿಕೊಳ್ಳಲು ಕಾಂಗ್ರೆಸ್ ನಿರಾಕರಿಸುತ್ತಿರುವುದು ಹಿಂದಿನಿಂದಲೂ ತಿಳಿದಿರುವ ವಿಚಾರ. ಆದರೆ, ಸತ್ಯವನ್ನು ಸದಾ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಕೊನೆಗೂ ಇಂದು ವಿಧಾನಪರಿಷತ್​​​ನಲ್ಲಿ ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ರಾಹುಲ್ ಗಾಂಧಿಯವರ ನಂಬಿಕಸ್ಥ ಮಿತ್ರರಾದ ಹಿರಿಯ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಬಿಕೆ ಅವರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದ್ದಾರೆ.

ಈ ಹೇಳಿಕೆಯು ಪಾಕಿಸ್ತಾನದ ಬಗೆಗಿನ ಕಾಂಗ್ರೆಸ್‌ನ ಮೃದು ಧೋರಣೆಯ ಮೇಲೆ ಬೆಳಕು ಚೆಲ್ಲುತ್ತದೆ. ಇದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ಹಲವಾರು ಭಯೋತ್ಪಾದಕ ಘಟನೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಆರ್ಟಿಕಲ್ 370 ವರೆಗೆ, ಅವರ ಧೋರಣೆ ಸ್ಪಷ್ಟವಾಗಿದೆ. ಪ್ರಧಾನಿ ಮೋದಿಯವರನ್ನು ಪಾಕಿಸ್ತಾನಿಗಳು ವಿರೋಧಿಸುವುದರಲ್ಲಿ ಆಶ್ಚರ್ಯವಿಲ್ಲ ಮತ್ತು ಕಾಂಗ್ರೆಸ್ ನೇತೃತ್ವದ ಭಾರತವನ್ನು ಬಯಸುವುದರಲ್ಲಿ ವಿಶೇಷವಿಲ್ಲ ವಿಜಯೇಂದ್ರ ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT