ಸಿದ್ದರಾಮಯ್ಯ 
ರಾಜಕೀಯ

'ಯಡಿಯೂರಪ್ಪಗಿಂತ ದೊಡ್ಡ ಹಿಂದೂ, ರಾಮ ಭಕ್ತ ಯಾರಿದ್ದಾರೆ? ಯತ್ನಾಳ್ ಗೆ ನೋಟೀಸ್ ನೀಡಲಾಗದಷ್ಟು ಬಿಜೆಪಿ ನಿರ್ವೀರ್ಯ'

ವ್ಯಕ್ತಿಯೊಬ್ಬ ಎಂತಹ ಘನಘೋರ ಅಪರಾಧಗಳನ್ನು ಬೇಕಾದರೂ ಎಸಗಲಿ, ಆತ ಕೇಸರಿ ಶಾಲನ್ನು ತಲೆಗೆ ಸುತ್ತಿಕೊಂಡು ನಾನೊಬ್ಬ ಹಿಂದೂ ಎಂದು ಕೂಗಿದರೆ ಬಿಜೆಪಿ ನಾಯಕರು ಆತನ ರಕ್ಷಣೆಗೆ ಧಾವಿಸುತ್ತಾರೆ. ಈ ಮೂಲಕ ಕೇಸರಿ ಶಾಲು ಮಾತ್ರವಲ್ಲ ಹಿಂದೂ ಧರ್ಮಕ್ಕೂ ಬಿಜೆಪಿ ನಾಯಕರು ಅವಮಾನ ಮಾಡುತ್ತಿದ್ದಾರೆ.

ಬೆಂಗಳೂರು: ಸುಮಾರು ನಾಲ್ಕು ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಭಾರತೀಯ ಜನತಾ ಪಕ್ಷಕ್ಕೆ ನಮ್ಮ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನ ದಿಗಿಲು ಹುಟ್ಟಿಸಿದೆ.

ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ. ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಹಿಂದೆ ಬಿಜೆಪಿ  ಸರ್ಕಾರ ಇದ್ದಾಗಲೇ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಯಡಿಯೂರಪ್ಪನವರಿಗಿಂತ ದೊಡ್ಡ ಹಿಂದೂ, ರಾಮ ಭಕ್ತ ಯಾರಿದ್ದಾರೆ? ಹಾಗಿದ್ದರೆ ಆಗಿನ ಸರ್ಕಾರ ಹಿಂದೂ ವಿರೋಧಿಯೇ? ಬಿಜೆಪಿ ಬಿಟ್ಟು ಬಿಡಿ, ಅದರ ಪರಿವಾರದ ನಾಯಕರು ಕೂಡಾ ಹಿಂದೂ ಯಡಿಯೂರಪ್ಪನವರನ್ನು ಬಂಧಿಸಿದ ಸರ್ಕಾರ ಹಿಂದು ವಿರೋಧಿ ಎಂದು ಕೂಗಾಡಲಿಲ್ಲವಲ್ಲ? ಈಗ ಯಾಕೆ ಈ ಕೂಗಾಟ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯದ ಬಿಜೆಪಿಯ ಸ್ಥಿತಿ ಒಂದು ಮನೆ ನೂರು ಬಾಗಿಲು ಎಂಬಂತಾಗಿದೆ. ಆ ಪಕ್ಷದ ರಾಜ್ಯಾಧ್ಯಕ್ಷರನ್ನು ಅದೇ ಪಕ್ಷದ ಹಿರಿಯ ನಾಯಕರು ಈಗಲೂ ಒಪ್ಪಿಕೊಂಡಿಲ್ಲ, ವಿರೋಧ ಪಕ್ಷದ ನಾಯಕರ ಮಾತಿಗೆ ಸದನದಲ್ಲಿಯೇ ಸದಸ್ಯರು ಬಿಡಿಗಾಸಿನ ಕಿಮ್ಮತ್ತು ಕೊಟ್ಟಿಲ್ಲ.  ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ದಿನಕ್ಕೊಂದು ಗಂಭೀರ ಸ್ವರೂಪದ ಆರೋಪ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕನಿಷ್ಠ ಒಂದು ಎಚ್ಚರಿಕೆಯ ನೋಟೀಸ್ ನೀಡಲಾಗದಷ್ಟು ಪಕ್ಷ ನಿರ್ವೀರ್ಯವಾಗಿದೆ. ಕಾಂಗ್ರೆಸ್ ಸರ್ಕಾರ ದಿನದಿಂದ ದಿನಕ್ಕೆ ಜನಾನುರಾಗಿಯಾಗುತ್ತಿದೆ. ಈ ಹತಾಶೆಯಿಂದ ಹೊರಬರಲು ಒಬ್ಬ ಕ್ರಿಮಿನಲ್ ಆರೋಪಿಯನ್ನು ಮುಂದಿಟ್ಟು ಬಿಜೆಪಿ ನಾಯಕರು ಕೂಗಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಒಬ್ಬ ಕ್ರಿಮಿನಲ್ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಬರಬಾರದಿತ್ತು. ಹುಬ್ಬಳ್ಳಿಯ ಆರೋಪಿಯನ್ನು ಸಮರ್ಥಿಸಿಕೊಂಡು ಹೋರಾಟಕ್ಕೆ ಇಳಿದಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ ಸ್ವಲ್ಪ ಬುದ್ದಿಗಿದ್ದಿ ಹೊಂದಿದವರಿದ್ದರೆ ದಯವಿಟ್ಟು ಆ ವ್ಯಕ್ತಿಯ ಮೇಲಿನ ಆರೋಪಗಳ ಪಟ್ಟಿಯನ್ನು ತರಿಸಿ ಓದಿ, ಆ ಮೇಲೆ ಹೋರಾಟಕ್ಕೆ ಇಳಿಯಿರಿ. ಜನಸಂಖ್ಯೆಯಲ್ಲಿ ಹಿಂದೂಗಳೇ ಬಹುಸಂಖ್ಯೆಯಲ್ಲಿರುವುದರಿಂದ ಜೈಲುಗಳಲ್ಲಿರುವ ಕೈದಿಗಳಲ್ಲಿಯೂ ಹಿಂದೂ ಧರ್ಮಿಯರೇ ಬಹುಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಹಿಂದೂ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಬಿಜೆಪಿ ಅವರ ಪರವಾಗಿ ಹೋರಾಟ ನಡೆಸುತ್ತಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕ್ರಿಮಿನಲ್ ಕೃತ್ಯಗಳು ಹೆಚ್ಚಾಗಲು ಅಪರಾಧ ಮತ್ತು ಅಪರಾಧಿಗಳಿಗೆ ಜಾತಿ-ಧರ್ಮದ ಬಣ್ಣಹಚ್ಚುವ ಬಿಜೆಪಿಯ  ಕಾನೂನು ವಿರೋಧಿ ನಡವಳಿಕೆಗಳೇ ಕಾರಣ. ವ್ಯಕ್ತಿಯೊಬ್ಬ ಎಂತಹ ಘನಘೋರ ಅಪರಾಧಗಳನ್ನು ಬೇಕಾದರೂ ಎಸಗಲಿ, ಆತ ಕೇಸರಿ ಶಾಲನ್ನು ತಲೆಗೆ ಸುತ್ತಿಕೊಂಡು ನಾನೊಬ್ಬ ಹಿಂದೂ ಎಂದು ಕೂಗಿದರೆ ಬಿಜೆಪಿ ನಾಯಕರು ಆತನ ರಕ್ಷಣೆಗೆ ಧಾವಿಸುತ್ತಾರೆ. ಈ ಮೂಲಕ ಕೇಸರಿ ಶಾಲು ಮಾತ್ರವಲ್ಲ ಹಿಂದೂ ಧರ್ಮಕ್ಕೂ ಬಿಜೆಪಿ ನಾಯಕರು ಅವಮಾನ ಮಾಡುತ್ತಿದ್ದಾರೆ. ಇದು ಧರ್ಮದ್ರೋಹದ ನಡೆ. ಕಾನೂನನ್ನು ಅದರ ಪಾಡಿಗೆ ಕೆಲಸ ಮಾಡಲು ಬಿಟ್ಟು ಬಿಡಿ ಎಂದಿದ್ದಾರೆ.

ರಾಜ್ಯದ ಬಿಜೆಪಿ  ನಾಯಕರಲ್ಲಿ ಈಗಲೂ ನಾನು ವಿನಂತಿ ಮಾಡುತ್ತಿದ್ದೇನೆ. ದೇವರು-ಧರ್ಮದ ಹೆಸರಲ್ಲಿ ಕ್ಷುಲಕ ರಾಜಕೀಯ ಮಾಡುವುದನ್ನು ಕೈಬಿಟ್ಟು ಜವಾಬ್ದಾರಿಯುತವಾದ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಪ್ರಯತ್ನ ಮಾಡಿ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ರೀತಿಯಲ್ಲಿ ನಾವು ರಾಜ್ಯವನ್ನು ಬಿಜೆಪಿ ಮುಕ್ತ ಮಾಡುತ್ತೇವೆ ಎಂಬ ಸೊಕ್ಕಿನ ಹೇಳಿಕೆಗಳನ್ನು ನೀಡುವುದಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿಯನ್ನು ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಬೇಕೆಂಬುದು ನನ್ನ ಗುರಿ. ರಾಜ್ಯ ಬಿಜೆಪಿ ನಾಯಕರ ಇತ್ತೀಚಿನ ಅವಾಂತರಗಳನ್ನೆಲ್ಲ ನೋಡಿದರೆ ಈ ಗುರಿ ಸಾಧನೆಗೆ ಅವರೇ ಸಹಕಾರ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT