ರಾಜಕೀಯ

ನಾನು ದೇವೇಗೌಡರ ಶಿಷ್ಯ, ನಾನು ಅವರ ರಾಜಕೀಯ ಅನುಯಾಯಿ; ಅಶೋಕ್ ಮೇಲೆ ನನಗೆ ಅಸಮಾಧಾನವಿಲ್ಲ: ಸೋಮಣ್ಣ

Shilpa D

ಬೆಂಗಳೂರು: ಮಾಜಿ ಸಚಿವ ವಿ ಸೋಮಣ್ಣ  ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದಾರೆ. ಈ ವೇಳೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು.

ಭೇಟಿ ಬಳಿಕ ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, ದೇವೇಗೌಡರನ್ನ ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ದೇವೇಗೌಡರ ತಂತ್ರಗಾರಿಕೆ ಕಲಿಯಬೇಕು. ನಾನು ಸೋತಬಳಿಕ ನನಗೆ ಕರೆ ಮಾಡಿ ಮಾತಾಡಿದ್ದರು. ಅವರು ನನ್ನ ಗುರುಗಳು. ನಾನು ಅವರ ಶಿಷ್ಯ. 1983ರಲ್ಲಿ ನಾನು ರಾಜಕೀಯ ಬಂದಾಗ ಅವರ ಅನುಯಾಯಿ ಆಗಿದ್ದೆ  ಎಂದು ಹೇಳಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ವರಿಷ್ಠ ನಾಯಕರನ್ನು ಬಿಜೆಪಿ ನಾಯಕ ವಿ.ಸೋಮಣ್ಣ ಭೇಟಿಯಾಗಿ ರಾಜಕೀಯ ವಿಚಾರದ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯ ನಂತರ ಪಕ್ಷದ ನಡೆಗೆ ಅಸಮಾಧಾನಗೊಂಡಿರುವ ಸೋಮಣ್ಣ, ರಾಜ್ಯ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡಿದ್ದು, ಇದೀಗ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.

ಜನತಾ ಪರಿವಾರದಲ್ಲೇ ಬೆಳೆದು ವಲಸೆ ಹೋಗಿದ್ದರೂ ಸೋಮಣ್ಣರನ್ನು ಗೌಡರ ಕುಟುಂಬ ಆತ್ಮೀಯವಾಗಿ ನಿವಾಸಕ್ಕೆ ಬರಮಾಡಿಕೊಂಡಿತು. ಈ ಸಂದರ್ಭದಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಮಾತುಕತೆ ನಡೆಸಲಾಗಿದೆ. ಸದ್ಯದ ಬಿಜೆಪಿಯಲ್ಲಿನ ವ್ಯವಸ್ಥೆಗೆ ಮುನಿಸಿಕೊಂಡಿರುವ ಸೋಮಣ್ಣ ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ದೆಹಲಿಗೂ ತೆರಳಿ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದು, ಅದಕ್ಕೂ ಮುನ್ನ ದಳಪತಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಗೌಡರ ಭೇಟಿಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸೋಮಣ್ಣ, ''ನನಗೆ ರಾಜಕೀಯ ಗೊತ್ತಾಗಿದ್ದೇ ದೇವೇಗೌಡರಿಂದ. ನಾನು ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದಿದ್ದೆ. 1976-77ರಲ್ಲಿ ಗೌಡರ ಭೇಟಿಯಾಯಿತು. ನಂತರ 30 ವರ್ಷಕ್ಕೂ ಹೆಚ್ಚು ಕಾಲ ನಾನು ಅವರ ಶಿಷ್ಯನಾಗಿ ರಾಜಕಾರಣದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಗೌಡರ ಪುತ್ರರಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಇಬ್ಬರು ನನಗೆ ಸಹೋದರರಂತಿದ್ದಾರೆ.

ನಾನು ಸ್ವಲ್ಪ ಗೊಂದಲಕ್ಕೆ ಸಂದರ್ಭದಲ್ಲಿ ನನ್ನ ನೋವು ಹಂಚಿಕೊಂಡ ಕುಟಂಬವೆಂದರೆ ಅದು ಗೌಡರ ಕುಟುಂಬ. ನನಗೆ ಸಮಾಧಾನ ಮಾಡಿ ಧೈರ್ಯವಾಗಿ ಪರಿಸ್ಥಿತಿ ಎದುರಿಸುವಂತೆ ದೇವೇಗೌಡರು ಸಲಹೆ ನೀಡಿದ್ದರು. ಅವರ ರಾಜಕೀಯ ವೈಖರಿ, ದೂರದೃಷ್ಟಿ, ರಾಷ್ಟ್ರದ ನಿರ್ವಹಣೆ, ರಾಜ್ಯದ ದೊಂಬರಾಟದ ಬಗ್ಗೆ ಅವರು ಒಂದು ಗಂಟೆಯಲ್ಲಿ ಮಾತನಾಡಿದರು. ದೇಶದ ಭವಿಷ್ಯದಲ್ಲಿ ಮೋದಿ ಕಾರ್ಯವೈಖರಿಯನ್ನು ಮಾಜಿ ಪ್ರಧಾನಿಯಾಗಿ ಹೇಳುತ್ತಿರುವುದು ಅವರ ನಿಷ್ಕಲ್ಮಶತೆಗೆ ಕೈಗನ್ನಡಿಯಾಗಿದ್ದ ಅವರ ಮೇಲಿನ ನನ್ನ ನಂಬಿಕೆ ದುಪ್ಪಟ್ಟಾಗಿದೆ  ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಇರುವುದರಿಂದ ಕೆಲ ವಿಚಾರ ಮಾತನಾಡಲ್ಲ. ನಮ್ಮಂಥವರಿಗೆ ಏನು ಅನಾನುಕೂಲ ಎಂಬ ಮಾಹಿತಿ ಅವರಿಗೆ ಇದೆ. ಅವರಿಗೇ ಅಂಟಿಕೊಂಡು ಹೋಗ್ತೇನೆ ಅಂದರೇ ಬೇರೆ ಮಾತಾಡಬೇಕಾಗುತ್ತೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೂ ಯುವಕ. ನೀನು ಬೆಳೆಯಬೇಕು, ರಾಜ್ಯದಲ್ಲಿ ದೊಡ್ಡ ನಾಯಕರು ಅಂತ ಇದ್ದಾರೆ. ಸೋಲಿಗೆ ಕಾರಣರಾದ ಮನೆಹಾಳರನ್ನು ಜೊತೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.

ಮ್ಮಂತಹವರ ಮೇಲೆ ಗದಾಪ್ರಹಾರ ಆದರೆ ಪರಿಣಾಮ ಆಗುತ್ತದೆ. ಎಷ್ಟರ ಮಟ್ಟಿಗೆ ಪರಿಣಾಮ ಆಗುತ್ತದೆ ಅಂತಾ ಚಿಂತನೆ ಮಾಡಬೇಕು. ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಹಿಂದಿನದ್ದೇ ನಡೆಸಿಕೊಂಡು ಹೋಗುತ್ತೇನೆ ಎಂಬುದನ್ನು ಬಿಡಬೇಕು. ಚಾಮರಾಜನಗರ ಜಿಲ್ಲೆಗೆ ಬಿ.ವೈ.ವಿಜಯೇಂದ್ರ ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು ವಿಜಯೇಂದ್ರ ರಾಜ್ಯಾಧ್ಯಕ್ಷರು, ಎಲ್ಲಿಗೆ ಬೇಕಾದರೂ ಹೋಗಲಿ ಎಂದು ಮಾತನಾಡಿದರು.

ನನ್ನ ಮತ್ತು ವಿರೋಧ ಪಕ್ಷದ ನಾಯಕ ಆರ್​ ಅಶೋಕ್ ಮಧ್ಯೆ ಸಣ್ಣ ಭಿನ್ನಾಭಿಪ್ರಾಯ ಸಹ ಇಲ್ಲ. ವಿಪಕ್ಷ ನಾಯಕ ಅಶೋಕ್​ ನನ್ನ ಭೇಟಿಗೆ ಪ್ರಯತ್ನ ಮಾಡಿದ್ದರು. ನಾನು ಮತ್ತು ಅಶೋಕ್ ಸ್ನೇಹಿತರು. ಅಶೋಕ್ ಮೊದಲು ಶಾಸಕನಾದಾಗ ನಾನು ಮಂತ್ರಿಯಾಗಿದ್ದೆ. ವಿಪಕ್ಷ ನಾಯಕ ಅಶೋಕ್​ ನನಗಿಂತ 14 ವರ್ಷ ಚಿಕ್ಕವರು. ಅಶೋಕ್ ಮೇಲೆ ನನಗೆ ಪ್ರೀತಿ, ವಿಶ್ವಾಸ ಇದೆ. ನಮ್ಮವರಿಂದಲೇ ನೋವಾದಾಗ ನನ್ನ ಭಾವನೆ ಹೇಳಿಕೊಂಡಿದ್ದೇನೆ. ಸಂಕ್ರಾಂತಿ ಬಳಿಕ ಎಲ್ಲವೂ ಸುಖಾಂತ್ಯವಾಗಬೇಕು ಎಂದರು.

SCROLL FOR NEXT