ರಾಜಕೀಯ

224 ಕ್ಷೇತ್ರಗಳಲ್ಲೂ ಸಿಎಂ, ಡಿಸಿಎಂ ಘೋಷಿಸಿ: ಕಾಂಗ್ರೆಸ್ ನಾಯಕರ ಬಗ್ಗೆ ಈಶ್ವರಪ್ಪ ಲೇವಡಿ 

Srinivas Rao BV

ಬೆಂಗಳೂರು: ಆಡಳಿತಾರೂಢ ಪಕ್ಷದಲ್ಲಿ ಇನ್ನೂ ಹೆಚ್ಚಿನ ಡಿಸಿಎಂ ಹುದ್ದೆ  ಸೃಷ್ಟಿಸಬೇಕೆಂಬ ವಿಚಾರವಾಗಿ ನಡೆಯುತ್ತಿರುವ ಜಟಾಪಟಿ ನಡೆಯುತ್ತಿರುವುದರ ಬಗ್ಗೆ ಬಿಜೆಪಿ ನಾಯಕ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಎಲ್ಲಾ 224 ಕ್ಷೇತ್ರಗಳಲ್ಲೂ ಸಿಎಂ, ಡಿಸಿಎಂ ಗಳನ್ನು ನೇಮಕ ಮಾಡಿ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕರು ಕೇವಲ ತೋರಿಕೆಗಾಗಿ ದಲಿತರ ಮೇಲೆ ಪ್ರೀತಿ ತೋರುತ್ತಾರೆ. ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ರಾಹುಲ್ ಪರ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಖರ್ಗೆ ಪರ ಯಾಕೆ ಮಾತಾಡಲಿಲ್ಲ? ಅವರ ಹೆಸರನ್ನು ಹೇಳಲಿಲ್ಲ? ಎಂದು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ನಲ್ಲಿ ಮೂರು ಜನ ನಾಯಕರಿದ್ದರೆ, ನಾಲ್ಕು ವಿಚಾರಗಳಲ್ಲಿ ಜಗಳವಿರುತ್ತದೆ. ಹಿಜಬ್ ಕೇಸ್ ವಾಪಸ್ ಪಡೆಯಲು ಯಾರು ಮನವಿ ಮಾಡಿದ್ದರು? ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. 

ಕಾಂಗ್ರೆಸ್ ನಾಯಕರು ರಾಮಮಂದಿರದ ಮಂತ್ರಾಕ್ಷತೆ ವಿಷಯದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದು, ಮಂತ್ರಾಕ್ಷತೆ ಅಕ್ಕಿ ಅನ್ನಭಾಗ್ಯದ್ದಲ್ಲ. ರೈತ ಬೆಳೆದಿದ್ದು. ಡಿಸಿಎಂ ಡಿಕೆ ಶಿವಕುಮಾರ್ ದೇಶದ ಜನರಲ್ಲಿ ಕ್ಷಮೆ ಕೇಳುವುದರ ಜೊತೆಗೆ ಮಂತ್ರಾಕ್ಷತೆ ಪಡೆದು ಅಯೋಧ್ಯೆಗೆ ಬರಬೇಕು ಎಂದು ಆಗ್ರಹಿಸಿದರು. ರಾಮ ಮಂದಿರದ ಆಹ್ವಾನ ಪತ್ರಿಕೆಯ ಜೊತೆ ನೀಡುತ್ತಿರುವ ಮಂತ್ರಾಕ್ಷತೆಯನ್ನು ರಾಜ್ಯದ ಅನ್ನಭಾಗ್ಯ ಅಕ್ಕಿಯಿಂದ ತಯಾರಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ತಮ್ಮನ್ನು ತಾವು ಹಿಂದುಳಿದ ನಾಯಕ ಎಂದು ಹೇಳುವ ಸಿದ್ದರಾಮಯ್ಯ ಅವಕಾಶ ಸಿಕ್ಕಾಗ ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಮಾಡುವ ಪ್ರಯತ್ನ ಮಾಡಲಿಲ್ಲ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

SCROLL FOR NEXT