ರಾಜಕೀಯ

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಮಹಾದ್ರೋಹ: ಮನೆ ಮನೆ ಪ್ರಚಾರಕ್ಕೆ ಕಾಂಗ್ರೆಸ್ ಸಿದ್ಧತೆ!

Manjula VN

ಮೈಸೂರು: ರಾಜ್ಯಕ್ಕೆ ಬರಬೇಕಾಗಿರುವ 1.90 ಲಕ್ಷ ಕೋಟಿ ರೂ. ತೆರಿಗೆ ಅನುದಾನವನ್ನು ಉಳಿಸಿಕೊಂಡು ಕೇಂದ್ರ ಸರ್ಕಾರ ಮಹಾದ್ರೋಹ ಮಾಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದ್ದು, ಮನೆ ಮನೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬದಿದೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಜಿಎಸ್‌ಟಿ ಸೇರಿದಂತೆ ಇನ್ನಿತರ ಮೂಲಗಳಿಂದ ಕೇಂದ್ರಕ್ಕೆ ತೆರಿಗೆ ಹರಿದು ಹೋದರೂ ರಾಜ್ಯಕ್ಕೆ ಬರಬೇಕಾಗಿರುವ ಅನುದಾನವನ್ನು ಸರಿಯಾಗಿ ನೀಡುತ್ತಿಲ್ಲ. ಆದ್ದರಿಂದ ಈ ಕುರಿತು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಆದಾಯ ಮತ್ತು ಕಾರ್ಪೋರೇಟ್ ತೆರಿಗೆ 2.23 ಲಕ್ಷ ಕೋಟಿ ರೂ. ಜಿಎಸ್ ಟಿ 1.40 ಲಕ್ಷ ಕೋಟಿ ರೂ., ಪೆಟ್ರೋಲ್, ಡೀಸೆಲ್ ಇಂಧನದ ಮೇಲೆ ವಿಧಿಸುವ ಸೆಸ್ ಚಾರ್ಜ್‌ಗಳಿಂದ 26 ರಿಂದ 30 ಸಾವಿರ ಕೋಟಿ ರೂ. ಸಂಗ್ರಹವಾಗುತ್ತದೆ. ರಾಜ್ಯ ವಲಯದಿಂದ ಸಂಗ್ರಹವಾಗುವ ಕಸ್ಟಮ್ ತೆರಿಗೆಗಳಿಂದ 30 ಸಾವಿರ ಕೋಟಿ ರೂ., ಜಿಎಸ್‌ಟಿ ಪ್ರತಿ ತಿಂಗಳು 15 ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ. ಅಲ್ಲದೆ ಹೆದ್ದಾರಿ ಟೋಲ್ಗಳಿಂದ 3 ಸಾವಿರ ಕೋಟಿ ರೂ. ಸಂಗ್ರಹವಾಗುತ್ತದೆ ಎಂದು ಹೇಳಿದರು.

ಇವೆಲ್ಲವನ್ನೂ ಸೇರಿಸಿ ಒಟ್ಟು 4.81 ಲಕ್ಷ ಕೋಟಿ ರೂ. ತೆರಿಗೆಯನ್ನು ಕೇಂದ್ರ ಸರ್ಕಾರ ಸಂಗ್ರಹ ಮಾಡುತ್ತದೆ. ಮಹಾರಾಷ್ಟ್ರದ ಬಳಿಕ ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮದಾಗಿದೆ. ಅದರಲ್ಲಿ ನಮಗೆ ಶೇ.42 ರಷ್ಟು ಅಂದರೆ, 1.90 ಲಕ್ಷ ಕೋಟಿ ರೂ.ವಾಪಸ್ ಕೊಡಬೇಕು. ಆದರೆ ಅವರು ಕೇವಲ 52,250 ಕೋಟಿ ರೂ.ನೀಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ 10 ವರ್ಷಗಳಲ್ಲಿ10 ಲಕ್ಷ ಕೋಟಿ ರೂ. ಸಾಲ ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ 10 ವರ್ಷಗಳಲ್ಲಿ 123 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ದೇಶದ ಒಟ್ಟು ಸಾಲ 258 ಲಕ್ಷ ಕೋಟಿ ರೂ. ಅಗಿದೆ. ಇದರಿಂದ ದೇಶದ ಪ್ರತಿಯೊಬ್ಬ ಪ್ರಜೆ ಮೇಲೂ 4 ಲಕ್ಷ ರೂ. ಸಾಲ ಹೊರಿಸಿದ್ದಾರೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಪೋರೇಟ್ ಕಂಪನಿಗಳ 20 ಲಕ್ಷ ಕೋಟಿ ರೂ. ಸಾಲಮನ್ನಾ ಆಗಿದೆ. ರೈತರ ಸಾಲ ಮಾತ್ರ ಮನ್ನಾ ಮಾಡಿಲ್ಲ. ರಾಜ್ಯಕ್ಕೆ ಕೇಂದ್ರ ದೊಡ್ಡ ದ್ರೋಹ ಮಾಡುತ್ತಿದ್ದರೂ ರಾಜ್ಯದ ಬಿಜೆಪಿ ನಾಯಕರು ಯಾರೂ ಪ್ರಶ್ನೆ ಮಾಡಿಲ್ಲ ಎಂದರು.

ಕೇಂದ್ರದಿಂದ ಅನುದಾನ ಬಿಡುಗಡೆಗೆ ಧ್ವನಿ ಎತ್ತದ ರಾಜ್ಯದ ಬಿಜೆಪಿ ನಾಯಕರು ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರದಿಂದ 35 ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ಕೇಂದ್ರ ಸಮಿತಿಯೇ ವರದಿ ಮಾಡಿದೆ. ಆದರೂ ಕೇಂದ್ರದಿಂದ ಬಿಡಿಗಾಸು ಅನುದಾನ ಬಂದಿಲ್ಲ. ಬಿಜೆಪಿ ನಾಯಕರು ಈ ವಿಚಾರ ಪ್ರಶ್ನೆ ಮಾಡೋದು ಬಿಟ್ಟು ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಇಡೀ ದೇಶದಲ್ಲೇ ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಇದನ್ನು ಸಹಿಸದೆ ಅನವಶ್ಯಕ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಅವರೇ ತಮ್ಮ ಸರ್ಕಾರದ ವಿರುದ್ಧ 47 ಪುಟಗಳ ದೂರು ಮಾಡಿದ್ದಾರೆ. ಇದರ ತನಿಖೆ ಕೈಗೊಂಡರೆ ಹಲವು ನಾಯಕರು ಜೈಲಿಗೆ ಹೋಗುತ್ತಾರೆ. ಈ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದು ಇರಲಿ, ಬಿಜೆಪಿ ಮತ್ತು ಜೆಡಿಎಸ್‌ನವರು ಒಂದಂಕಿಯನ್ನು ದಾಟಲ್ಲ. ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT