ರಾಜಕೀಯ

ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿ ಚಟುವಟಿಕೆ ಶುರು, ಅಭ್ಯರ್ಥಿ ಫೈನಲ್?

Manjula VN

ಬೆಂಗಳೂರು: ಬಿಜೆಪಿ ವರಿಷ್ಠ ಬಿ.ಎಸ್.ಯಡಿಯೂರಪ್ಪ ಅವರನ್ನು ಜೆಡಿಎಸ್ ನಾಯಕರು ಭಾನುವಾರ ಭೇಟಿ ಮಾಡಿದ್ದು, ಈ ಮೂಲಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಅಧಿಕೃತ ಚಟುವಟಿಕೆ ಆರಂಭವಾದಂತಾಗಿದೆ.

ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಎಪಿ ರಂಗನಾಥ ಅವರನ್ನು ಕಣಕ್ಕಿಳಿಸಲು ಉಭಯ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಬಿಜೆಪಿ ನಾಯಕರ ಜತೆ ಜೆಡಿಎಸ್ ನಾಯಕರು ಮೈತ್ರಿ ಘೋಷಣೆ ಮಾಡಿಕೊಂಡಿದ್ದರು. ಬಳಿಕ ಬಿಜೆಪಿ ರಾಜ್ಯ ನಾಯಕರು ಅನೌಪಚಾರಕವಾಗಿ ಸಾಲು ಸಾಲಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು.

ಭಾನುವಾರ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಭೆ ನಡೆಸುವ ಮೂಲಕ ಮೈತ್ರಿಗೆ ರಾಜ್ಯ ಮಟ್ಟದಲ್ಲಿ ಮುನ್ನುಡಿ ಬರೆದರು. ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಮಾತ್ರವಲ್ಲದೆ, ವಿಧಾನ ಪರಿಷತ್ ಚುನಾವಣೆ ಕುರಿತೂ ಚರ್ಚಿಸಿದ್ದಾರೆ.

ಉಭಯ ಪಕ್ಷಗಳ ನಾಯಕರ ನಡುವೆ ಸಮನ್ವಯ ಸಾಧಿಸುವುದು, ಲೋಕಸಭೆ ಟಿಕೆಟ್ ಹಂಚಿಕೆ ಹಾಗೂ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಸಭೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಉಭಯ ಪಕ್ಷಗಳ ಪ್ರಮುಖ ನಾಯಕರು ಪ್ರಥಮ ಹಂತದ ಸಭೆ ನಡೆಸಿದ್ದೇವೆ. ಶಿಕ್ಷಕರ ಕ್ಷೇತ್ರದ ಉಪಚುನಾವಣೆ, ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಚರ್ಚಿಸಲಾಗಿದೆ. ಈ ಸಭೆಯ ಮಾಹಿತಿಯನ್ನು ಬಿಜೆಪಿ ಹೈಕಮಾಂಡ್‌ಗೆ ತಲುಪಿಸಲಾಗುವುದು. ಮುಂಬರುವ ಲೋಕಸಭೆ ಚುನಾವಣೆಗೆ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಿಂದಲೇ ಸಂದೇಶವನ್ನು ನೀಡಲಿದ್ದೇವೆ ಎಂದು ಹೇಳಿದರು.

 ಪ್ರಧಾನಿ ಮೋದಿ ಕೈ ಬಲಪಡಿಸಲು ಉಭಯ ಪಕ್ಷಗಳು ಒಟ್ಟಾಗಿ ಹೋಗುತ್ತೇವೆ. ರಾಜ್ಯದಲ್ಲಿ ಕೆಟ್ಟ ಸರ್ಕಾರವಿದೆ ಅದು ತೊಲಗಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮುಖಂಡರಾದ ಡಿ.ವಿ.ಸದಾನಂದಗೌಡ, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಗೋವಿಂದ್ ಕಾರಜೋಳ, ಜೆಡಿಎಸ್ ಮುಖಂಡರಾದ ಜಿ.ಟಿ.ದೇವೇಗೌಡ, ಕೆ.ಎ.ತಿಪ್ಪೇಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ಬೋಜೇಗೌಡ ಉಪಸ್ಥಿತರಿದ್ದರು.

SCROLL FOR NEXT