ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಸರ್ಕಾರದ ನಿರ್ಧಾರವು ಮುಂದಿನ ಪೀಳಿಗೆಗೆ ಹೊಸ ದಿಕ್ಕನ್ನು ನೀಡಲು ಮತ್ತು ಪ್ರದೇಶಕ್ಕೆ ಅಭಿವೃದ್ಧಿಯನ್ನು ತರಲು 'ಬ್ರಾಂಡ್ ಬೆಂಗಳೂರು' ಬಳಸಿಕೊಳ್ಳುತ್ತಿರುವುದಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರವಾದ ರಾಮನಗರದ ಹೆಸರನ್ನು ಸರ್ಕಾರ ಬದಲಾಯಿಸುತ್ತಿಲ್ಲ. ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ನಾಲ್ಕು ತಾಲ್ಲೂಕುಗಳನ್ನು ಒಳಗೊಂಡಿರುವ ಜಿಲ್ಲೆಯನ್ನು ಮಾತ್ರ ಬದಲಾಯಿಸಲಾಗುವುದು ಎಂದು ಹೇಳಿದರು. ನಾವು ರಾಮನಗರ ಪಟ್ಟಣದ ಹೆಸರನ್ನು ಮುಟ್ಟುತ್ತಿಲ್ಲ. ಬೆಂಗಳೂರು ನಮ್ಮ ಜಿಲ್ಲೆ. ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲೂಕಿನಲ್ಲಿ ವಾಸಿಸುತ್ತಿರುವವರು ನಮ್ಮ ಜನ. ನಮ್ಮದು ಬೆಂಗಳೂರು, ರಾಮನಗರ ಅಲ್ಲ ಎಂದು ಅವರು ತಿಳಿಸಿದರು.
ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸಲು ರಾಜ್ಯ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಇಂದು ಬೆಂಗಳೂರು ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ನಮ್ಮ ಪೂರ್ವಜರು ಇಟ್ಟ ಹೆಸರನ್ನು ನಾವೇಕೆ ಹಾಳು ಮಾಡಬೇಕು? ಎಂದು ಪ್ರಶ್ನಿಸಿದ ಶಿವಕುಮಾರ್, ಉದ್ದೇಶಿತ ಬೆಂಗಳೂರು ದಕ್ಷಿಣ ಜಿಲ್ಲೆಗೆ ರಾಮನಗರವೇ ಕೇಂದ್ರ ಸ್ಥಾನವಾಗಿ ಉಳಿಯಬೇಕು ಎಂದರು. ಹೆಸರು ಬದಲಾವಣೆಯ ಹಿಂದಿನ ಕಾರಣವನ್ನು ವಿವರಿಸಿದ ಅವರು, ನಮ್ಮ ಮುಂದಿನ ಪೀಳಿಗೆಗೆ ಹೊಸ ದಿಕ್ಕು, ಉತ್ತಮ ಆಲೋಚನೆಗಳು, ಹೊಸ ಆಲೋಚನೆಗಳು ಮತ್ತು ಅವರ ಅಭಿವೃದ್ಧಿಯನ್ನು ನೀಡಲು ನಾವು ಯೋಚಿಸುತ್ತಿದ್ದೇವೆ ಎಂದು ತಿಳಿಸಿದರು.