ಮೈಸೂರು: ದ್ವೇಷದ ರಾಜಕಾರಣ ಮಾಡುವುದೇ ಬಿಜೆಪಿಯವರ ಕೆಲಸ. ಹೆದರಿಸುವುದು, ಬೆದರಿಸುವುದು ಆ ಪಕ್ಷದ ಸಂಸ್ಕೃತಿ. ಇದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಜನರು ಈ ಬಾರಿ ಬಿಜೆಪಿಯವರಿಗೆ ಬಹುಮತ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಸಚಿವ ಸಂಪುಟದಲ್ಲಿ 8 ಜನ ಸಂಸದರಿಗೆ ಸಚಿವ ಸ್ಥಾನ ನೀಡಿದರೂ, ದಕ್ಷಿಣ ಭಾರತದಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಬಿಜೆಪಿ ಆರ್ಎಸ್ಎಸ್ನ ಅಡಿಪಾಯ ಇರುವಂತಹ ಪಕ್ಷ. ಆರ್ಎಸ್ಎಸ್ನ ಮುಖವಾಡ ಇರುವಂತಹ ಪಕ್ಷ ಅದು. ಇಂತಹ ಪಕ್ಷವನ್ನು ನಮ್ಮ ದಕ್ಷಿಣ ಭಾರತದ ಜನ ಯಾರೂ ಬೆಂಬಲಿಸುವುದಿಲ್ಲ. ಈ ಬಾರಿ ಉತ್ತರ ಭಾರತದ ಕೆಲವೆಡೆ ಕೂಡ ಅವರಿಗೆ ಹಿನ್ನಡೆಯಾಗಿದೆ. ಸ್ವತಃ ಆರ್ಎಸ್ಎಸ್ನವರೇ, ಅಹಂಕಾರ ಇದ್ದರೆ ಜನರೇ ಪಾಠ ಕಲಿಸುತ್ತಾರೆ ಎಂಬುದಾಗಿ ಬಿಜೆಪಿಗೆ ಹೇಳಿದ್ದಾರೆ. ಯಾವತ್ತೂ ಬಿಜೆಪಿಯವರದ್ದು ಬೆದರಿಸುವ ಸಂಸ್ಕೃತಿ ಎಂದು ಹೇಳಿದರು.
ದೇವೇಗೌಡರ ಕುಟುಂಬದ ನಂತರ ಯಡಿಯೂರಪ್ಪ ಅವರ ಕುಟುಂಬವನ್ನು ಗುರಿ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನೇ ರದ್ದುಗೊಳಿಸಿದ್ದರಲ್ಲಾ ಅದಕ್ಕೆ ಏನೆಂದು ಕರೆಯುವುದು? ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೇ ಕಳಿಸಿದ್ದಾರಲ್ಲಾ ಅದಕ್ಕೆ ಏನೆಂದು ಕರೆಯುವುದು? ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಅಥವಾ ಪ್ರೀತಿಯ ರಾಜಕಾರಣ ಎನ್ನಬೇಕಾ? ಸೇಡಿನ ರಾಜಕಾರಣ ಮಾಡುವವರು ಅವರು. ಅದೇ ಬಿಜೆಪಿಯವರ ಕೆಲಸ. ನಾವು ಯಾವತ್ತು ಕೂಡ ಸೇಡಿನ ರಾಜಕಾರಣ ಮಾಡುವುದಿಲ್ಲ. ನಾನು ನೆನ್ನೆ–ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ಇಂದಿನವರೆಗೂ ಯಾರ ಮೇಲೂ ಸೇಡಿನ ರಾಜಕಾರಣ ಮಾಡಿಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಆದಾಯ ಮಿತಿಯನ್ನು ಹೆಚ್ಚಿಸಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆಯಲ್ಲಾ ಎಂಬ ಪ್ರಶ್ನೆಗೆ, ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿರುವುದು ನನಗೆ ಗೊತ್ತಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇನೆ ಎಂದರು.
ಇದೇ ವೇಳೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲೇ ಮಾಡುತ್ತೇವೆ ಎಂದೂ ಹೇಳಿದರು.