ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ತಿರಸ್ಕರಿಸಿರುವ ರಾಜ್ಯದ ಜನತೆ,ಚುನಾಯಿತ ಸಂಸದರಿಂದ ತೆರವಾದ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಮತ್ತೆ ತಿರಸ್ಕರಿಸಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾನುವಾರ ಹೇಳಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಂತ್ರಗಳು ಫಲಿಸುವುದಿಲ್ಲ ಒಂದು ಲೋಕಸಭಾ ಸ್ಥಾನದಿಂದ ಒಂಬತ್ತಕ್ಕೆ ಸ್ಥಾನವನ್ನು ಹೆಚ್ಚಿಸಿಕೊಂಡಿದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ 146 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಎಂಬುದನ್ನು ಸ್ಮರಿಸಬೇಕಿದೆ.
ನಾನು ಮುಖ್ಯಮಂತ್ರಿಯಾಗಿರದಿದ್ದರೂ ಕೂಡ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳಿಂದಲೇ ಗೆಲುವು ಸಾಧಿಸುತ್ತೇವೆಂದು ಕಾಂಗ್ರೆಸ್ ತಿಳಿದಿದೆ. ಆದರೆ, ಜನರು ಈ ಯೋಜನೆಗಳನ್ನು ತಿರಸ್ಕಿರಿಸಿದ್ದಾರೆಂದು ಹೇಳಿದರು.
ಇದೇ ವೇಳೆ 3-4 ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕೆಂಬ ಬೇಡಿಕೆ ಕಾಂಗ್ರೆಸ್ ಪಾಳಯದಲ್ಲಿ ನೈತಿಕತೆ ಮತ್ತು ಆತ್ಮವಿಶ್ವಾಸಕ್ಕೆ ಹೊಡೆತ ಬಿದ್ದಿರುವುದನ್ನು ತೋರಿಸುತ್ತಿದೆ ಎಂದು ತಿಳಿಸಿದರು.
ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸರಕಾರವನ್ನು ಟೀಕಿಸಿದ ಅವರು, ಬೀಜ, ರಸಗೊಬ್ಬರ ಸೇರಿದಂತೆ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಕೈಗಾರಿಕೋದ್ಯಮಿಗಳು ಕರ್ನಾಟಕದಿಂದ ಗುಳೆ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಂದ ಹಣ ವಸೂಲಿ ಮಾಡುತ್ತಿದೆ ಒಂದೆಡೆ ಉಚಿತ ಗ್ಯಾರಂಟಿಗಳನ್ನು ನೀಡಿ, ಮತ್ತೊಂದೆಡೆ ಇಂಧನ ಬೆಲೆ, ತೆರಿಗೆ, ಮುದ್ರಾಂಕ ಶುಲ್ಕ, ನೋಂದಣಿ ದರಗಳನ್ನು ಹೆಚ್ಚಿಸುತ್ತಿದೆ. ರಾಜ್ಯ ಸರ್ಕಾರದ ನೀತಿಗಳಿಂದ ಜನರು ನಿರಾಶೆಗೊಂಡಿದ್ದಾರೆ. ಬಿತ್ತನೆಬೀಜಗಳ ಬೆಲೆ ಶೇ.40-50ರಷ್ಟು ಏರಿಕೆಯಾಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ವಾಗ್ದಾಳಿ ನಡೆಸಿದರು.