ಡಾ ಹೆಚ್ ಸಿ ಮಹದೇವಪ್ಪ(ಸಂಗ್ರಹ ಚಿತ್ರ)
ಡಾ ಹೆಚ್ ಸಿ ಮಹದೇವಪ್ಪ(ಸಂಗ್ರಹ ಚಿತ್ರ) 
ರಾಜಕೀಯ

ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಲಿಲ್ಲ: ಬೇಸರ ಹೊರಹಾಕಿದ ಸಚಿವ ಮಹದೇವಪ್ಪ

Sumana Upadhyaya

ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ನಲ್ಲಿ ಮತ್ತೆ ದಲಿತ ಸಿಎಂ ವಿಚಾರ ಮುನ್ನಲೆಗೆ ಬಂದಿದೆ. ದಲಿತರಿಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲವೆಂದು ಸಚಿವ ಡಾ. ಹೆಚ್ ಸಿ ಮಹದೇವಪ್ಪ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಎಸ್​ಸಿ, ಎಸ್​ಟಿ ನೌಕರರ ಸಮಾವೇಶದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ನಾನು ಪಾಲಿಸಿ ಮೇಕಿಂಗ್ ಸ್ಥಾನದಲ್ಲಿಲ್ಲ ಎಂದು ನೊಂದು ನುಡಿದರು.

ನೀವು ನಾಯಕರನ್ನು ಫಾಲೋ ಮಾಡುತ್ತಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರು ಯಾಕೆ ಸಿಎಂ ಆದರು? ರಾಜ್ಯದಲ್ಲಿ ಒಗ್ಗಟಾಗಿ ಪಕ್ಷಕ್ಕೆ ಮತ ನೀಡಿದ ಬಳಿಕವೂ ಪುನಃ ಸಿಎಂ ಸ್ಥಾನ ಕೊಡಿ ಎಂದು ಕೇಳುವ ಪರಿಸ್ಥಿತಿ ನಮ್ಮದಾಗಿದೆ. ಮತ ನಮ್ಮದಿದೆ, ನಾಯಕತ್ವ ಇನ್ಯಾರ ಬಳಿಯೋ ಇದೆ. ಇದಕ್ಕೆ ನಾವು ನಮ್ಮ ನಾಯಕತ್ವ ಬೆಳೆಸದಿರುವುದೇ ಕಾರಣ ಎಂದು ಬೇಸರದಿಂದ ಹೇಳಿದರು.

ಡಾ. ಜಿ ಪರಮೇಶ್ವರ್, ಖರ್ಗೆ ಅವರಾಗಲಿ, ನಾನಾಗಲಿ ನೀತಿ ರೂಪಿಸುವ ಜಾಗದಲ್ಲಿಲ್ಲ. ನಾವು ಸಿಎಂ ಆಗಲಿಲ್ಲ. ಅಂಬೇಡ್ಕರ್ ಬಳಿಕ ಮತ್ತೊಬ್ಬ ದಲಿತ ನಾಯಕ ಸಿಗಲಿಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ. ಆದರೂ ನಮ್ಮ ಪ್ರಭಾವ ಬಳಸಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ, ಮುಂಬಡ್ತಿ ಮೀಸಲಾತಿ ಸೇರಿದಂತೆ ಕೆಲ ಐತಿಹಾಸಿಕ ತೀರ್ಮಾನ ಮಾಡಿಸಿದ್ದೇವೆ. ಇದು ಇವತ್ತಿನ ದೇಶದ ರಾಜಕೀಯ ಸನ್ನಿವೇಶ ಎಂದರು.

1987 ರಲ್ಲಿ 27 ಜನ ದಲಿತ ಶಾಸಕರು ಇದ್ದರು. ಬಿ ರಾಚಯ್ಯನವರು ಮುಖ್ಯಮಂತ್ರಿ ಆಗಬೇಕು ಅಂತ ಎದ್ದು ಹೇಳಿದವನು ನಾನೊಬ್ಬನೇ ಶಾಸಕ. ಉಳಿದ 26 ಜನ ದಲಿತ ಶಾಸಕರು ತಲೆ ಮೇಲೆ ಸೆರಗು ಹಾಕಿಕೊಂಡು ಕೂತಿದ್ದರು. ಕೊನೇ ಪಕ್ಷ 26 ಜನರೂ ಎದ್ದಿದ್ದರೆ ನಾಯಕತ್ವ ರಕ್ಷಣೆ ಮಾಡಬಹುದಿತ್ತು. ಆಗ ದೇವೇಗೌಡರು ‘ನಾನೇನಪ್ಪ ಮಾಡಲಿ ಮಹದೇವಪ್ಪ ಬಿಟ್ಟರೆ ಯಾರೂ ಮತ್ತೊಬ್ಬರು ಹೇಳಲೇ ಇಲ್ಲ’ ಎಂದು ಹೇಳಿದ್ದರು. ಇದು ನಮ್ಮ ಹಣೆಬರಹ ಎಂದು ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಕೂಡ ಕೆಲವು ಬಾರಿ ದಲಿತ ಸಿಎಂ ವಿಚಾರ ಚರ್ಚೆಗೆ ಬಂದಿತ್ತು. ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ ಪರಮೇಶ್ವರ್ ಮತ್ತಿತರ ದಲಿತ ನಾಯಕರ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿಬಂದಿದ್ದವು.

SCROLL FOR NEXT