ಸಚಿವ ರಾಮಲಿಂಗಾ ರೆಡ್ಡಿ
ಸಚಿವ ರಾಮಲಿಂಗಾ ರೆಡ್ಡಿ 
ರಾಜಕೀಯ

ಬಿಜೆಪಿ ಅವಧಿಯಲ್ಲಿ ಕರ್ನಾಟಕ ಭಯೋತ್ಪಾದಕರ ತಾಣವಾಗಿತ್ತು: ಸಚಿವ ರಾಮಲಿಂಗಾ ರೆಡ್ಡಿ

Lingaraj Badiger

ಬೆಂಗಳೂರು: ಬಿಜೆಪಿ ಅಧಿಕಾರಾವಧಿಯಲ್ಲಿ ರಾಜ್ಯ 'ಭಯೋತ್ಪಾದಕರ ತಾಣ' ಆಗಿತ್ತು ಎಂದು ಸಚಿವ ಮತ್ತು ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅವರು ಬುಧವಾರ ಆರೋಪಿಸಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಮತ್ತು ಪಾಕ್ ಪರ ಘೋಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳಿಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಹಿಂದಿನ ಸರ್ಕಾರ ಏನು ಮಾಡಿದೆ? ಪ್ರಶ್ನಿಸಿದರು.

"ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟವನ್ನು ನಾನು ಸಮರ್ಥಿಸಿಕೊಳ್ಳವುದಿಲ್ಲ. ಸ್ಫೋಟದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ" ಎಂದು ಸಚಿವರು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸಿದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ. 'ಬಿಜೆಪಿ ಸರ್ಕಾರದ ಅವಧಿಯಲ್ಲಿ 6 ಕಡೆ ಸರಣಿ ಬಾಂಬ್ ಸ್ಫೋಟಗಳು ನಡೆದಿವೆ. ಬಿಜೆಪಿ ಸರ್ಕಾರವಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣ, ಮಲ್ಲೇಶ್ವರಂ, ವಿಮಾನ ನಿಲ್ದಾಣ, ಮಂಗಳೂರು ಬಳಿ ಸ್ಫೋಟಗಳು ನಡೆದಿವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಬಿಜೆಪಿಯವರು ಮತಕ್ಕಾಗಿ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ ಸಾರಿಗೆ ಸಚಿವರು, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದೇವೆ ಎಂಬುದೆಲ್ಲ ಸುಳ್ಳು. ನಮಗೆ ಎಲ್ಲರೂ ಒಂದೇ. ಆದರೆ ಬಿಜೆಪಿಯವರು ಮತಕ್ಕಾಗಿ ಜನರನ್ನು ವಿಭಜಿಸುತ್ತಾರೆ ಎಂದರು.

ವಿಧಾನಸೌಧದ ಹೊರಗೆ ಪಾಕ್ ಪರ ಘೋಷಣೆ ಕೂಗಿದವರನ್ನು ಕೆಲವು ಸಚಿವರು ಸಮರ್ಥಿಸಿಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಘೋಷಣೆಗಳನ್ನು ಕೂಗಿಲ್ಲ ಅಂತ ಯಾರು ಹೇಳಿದರೋ ಅವರನ್ನೇ ಹೋಗಿ ಕೇಳಿ ಎಂದರು.

ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು, ಅರ್ಧ ಡಜನ್‌ಗೂ ಹೆಚ್ಚು ಜನ ಗಾಯಗೊಂಡಿದ್ದಾರೆ.

SCROLL FOR NEXT