ಸುಮಲತಾ ಮತ್ತು ಪ್ರತಾಪ್ ಸಿಂಹ
ಸುಮಲತಾ ಮತ್ತು ಪ್ರತಾಪ್ ಸಿಂಹ 
ರಾಜಕೀಯ

ಸಂಚಲನ ಸೃಷ್ಟಿಸಿದ ಹಳೇ ಮೈಸೂರು ಭಾಗ: ಸಂಸತ್ ಪಾಸ್ ಪ್ರಕರಣದಲ್ಲಿ 'ಸಿಂಹ' ತಲೆದಂಡ; ಮೈತ್ರಿ ಹಿತಾಸಕ್ತಿಗಾಗಿ 'ಸುಮಲತಾ' ಬಲಿ!

Shilpa D

ಮೈಸೂರು: ಲೋಕಸಭೆ ಚುನಾವಣೆಗಾಗಿ ರಾಜ್ಯದ ಮೂರು ಪಕ್ಷಗಳು ಸಮರ್ಥ ಅಭ್ಯರ್ಥಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ನಡುವೆ ಹಳೇ ಮೈಸೂರು ಭಾಗದ ಅಭ್ಯರ್ಥಿಗಳ ಬಗ್ಗೆ ತೀವ್ರವಾದ ಚರ್ಚೆ ನಡೆಯುತ್ತಿದ್ದು, ಹಲವು ಊಹಾ ಪೋಹಗಳು ಕೇಳಿ ಬರುತ್ತಿವೆ.

ಹೆಚ್ಚುತ್ತಿರುವ ಆಕಾಂಕ್ಷಿಗಳ ಪಟ್ಟಿ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಯುತ್ತಿರುವುದರಿಂದ ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಟಿಕೆಟ್ ಯಾರಿಗೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಉಭಯ ಪಕ್ಷಗಳೂ ಅಚ್ಚರಿ ಮೂಡಿಸುವ ಸಾಧ್ಯತೆ ಇದೆ. ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಬಿಜೆಪಿ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದು, ಹ್ಯಾಟ್ರಿಕ್ ಸಾಧನೆ ನಿರೀಕ್ಷೆಯಲ್ಲಿದ್ದಾರೆ.

ಆದರೆ ಇಬ್ಬರು ಪ್ರತಿಭಟನಾಕಾರರು ಸಂಸತ್ತಿಗೆ ಹೋಗಲು ಅವರ ಕಚೇರಿಯಿಂದ ಪಾಸ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದಾಗ, ಅವರು ಸಂದರ್ಶಕರ ಗ್ಯಾಲರಿಗಳಿಂದ ಸಂಸತ್ತಿನ ಮಹಡಿಗೆ ಹಾರಿ ಪ್ರತಿಭಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಾರಿ ಪ್ರತಾಪ್ ಸಿಂಹ ಅವರಿಗೆ ಮೈಸೂರು ಕ್ಷೇತ್ರದ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿವೆ.

ಇದು ಪ್ರತಾಪ್ ಸಿಂಹ ಅವರ ಪ್ರಮುಖ ಎಡವಟ್ಟುಗಳಲ್ಲಿ ಒಂದಾಗಿದೆ. ಈ ಘಟನೆಯಿಂದ ಮೈಸೂರು ಅರಸು ಮನೆತನದ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಡಿಸಿಸಿ ಅಧ್ಯಕ್ಷ ವಿಜಯ್‌ಕುಮಾರ್‌, ನವದೆಹಲಿಯ ಪ್ರಮುಖ ನರರೋಗ ತಜ್ಞ ಸುಶ್ರುತ್‌ ಗೌಡ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ, ಪಕ್ಷದ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರ ಆಯ್ಕೆಗೆ ಮನ್ನಣೆ ನೀಡುವ ಸಾಧ್ಯತೆ ಇದೆ.

ಮಂಡ್ಯ ಕ್ಷೇತ್ರದಲ್ಲಿ ತೀವ್ರರೀತಿಯ ರಾಜಕೀಯ ಡ್ರಾಮಾ ನಡೆಯುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಕೆಲವು ಕಠಿಣ ಚೌಕಾಶಿಯಲ್ಲಿ ತೊಡಗಿವೆ. ಕ್ಷೇತ್ರದಿಂದ ಕಣಕ್ಕಿಳಿಯಲು ಜೆಡಿಎಸ್ ಹಠ ಹಿಡಿದಿದೆ. ಇದರೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದ ಸುಮಲತಾ ಅವರನ್ನು ಬಲಿಕೊಡಬೇಕೋ ಅಥವಾ ಸ್ಥಾನ ಬಿಟ್ಟುಕೊಡಲು ನಿರಾಕರಿಸಬೇಕೋ ಎಂಬ ಸಂಕಷ್ಟಕ್ಕೆ ಬಿಜೆಪಿ ಸಿಲುಕಿದೆ.

ಚಾಮರಾಜನಗರದಲ್ಲೂ ಪಕ್ಷಗಳು ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದು, ಹಿರಿಯ ನಾಯಕ ವಿ ಶ್ರೀನಿವಾಸ ಪ್ರಸಾದ್ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸ್ಪರ್ಧಿಸಲು ಇಚ್ಛಿಸದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ ಇದರ ಜೊತೆಗೆ ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.

SCROLL FOR NEXT