ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ  
ರಾಜಕೀಯ

ಕಲಬುರಗಿ ಲೋಕಸಭಾ ಕ್ಷೇತ್ರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ದೊಡ್ಮನಿ ಸ್ಪರ್ಧೆ?

Sumana Upadhyaya

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಅವರ ಅಳಿಯ ರಾಧಾಕೃಷ್ಣ ದೊಡ್ಮನಿ ಅವರನ್ನು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಲ್ಲಿ ವೇದಿಕೆ ಸಜ್ಜಾಗಿದೆ.

ರಾಜಕೀಯದಲ್ಲಿ ಹಿಡಿತ ಇಟ್ಟುಕೊಂಡಿರುವ ದೊಡ್ಮನಿ, ಖರ್ಗೆ ಅವರಿಗೆ ರಾಜಕೀಯ ಚಟುವಟಿಕೆಗಳಲ್ಲಿ ನೆರವು ನೀಡುತ್ತಿದ್ದಾರೆ. ಒಂದು ವೇಳೆ ಸ್ಪರ್ಧಿಸಲು ಅಭ್ಯರ್ಥಿಯಾಗಿ ಆಯ್ಕೆಯಾದರೆ ಇದೇ ಮೊದಲ ಬಾರಿಗೆ ಅವರು ಸ್ಪರ್ಧಿಸುತ್ತಿರುವುದಾಗಿದೆ.

ಕಲಬುರಗಿಯಿಂದ ದೊಡ್ಮನಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಜಿಲ್ಲಾ ಘಟಕದ ಹಲವು ಹಿರಿಯ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ್ ಗುತ್ತೇದಾರ್ ಸೇರಿದಂತೆ; ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷ ಡಾ ಅಜಯ್ ಸಿಂಗ್; ಕಲಬುರಗಿ-ಉತ್ತರ ಶಾಸಕಿ ಕನೀಜ್ ಫಾತಿಮಾ; ಅಫಜಲಪುರ ಶಾಸಕ ಎಂ.ವೈ.ಪಾಟೀಲ; ಕಲಬುರಗಿ-ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ; ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರ ಮತ್ತು ಚಂದ್ರಶೇಖರ ಪಾಟೀಲ ಹುಮನಾಬಾದ್, ಮಾಜಿ ಸಚಿವ ರೇವು ನಾಯ್ಕ ಬೆಳಮಗಿ ಪತ್ರ ಬರೆದಿದ್ದಾರೆ.

ಕಲಬುರಗಿಯಿಂದ ಲೋಕಸಭೆ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಕೆಪಿಸಿಸಿಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಘಟಕವು ಈ ಹಿಂದೆ ಒಮ್ಮತದ ಮನವಿಯನ್ನು ಕಳುಹಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ ಅಭ್ಯರ್ಥಿ ಪರ ಒಗ್ಗಟ್ಟಾಗಿ ಕೆಲಸ ಮಾಡಲು ಇತ್ತೀಚಿನ ಪತ್ರದಲ್ಲಿ ಮುಖಂಡರು ಸಮ್ಮತಿ ಸೂಚಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಲ್ಲಿಸಿದ ಮನವಿಯಲ್ಲಿ ದೊಡ್ಮನಿ ಅವರು ಸರಳ ವ್ಯಕ್ತಿ ಹಾಗೂ ಸಜ್ಜನಿಕೆಯಿಂದ ಎಲ್ಲ ಜನರೊಂದಿಗೆ ಪ್ರೀತಿ, ವಾತ್ಸಲ್ಯದಿಂದ ಬೆರೆತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಲ್ಲದೆ, ಖರ್ಗೆ ಅವರ ರಾಜಕೀಯ ಚಟುವಟಿಕೆಗಳಿಗೆ ನೆರವಾಗಿದ್ದಾರೆ. ಇದನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷವು ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದೊಡ್ಮನಿ ಅವರನ್ನು ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಿಂದ (2009 ಮತ್ತು 2013) ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ, 2019 ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ನಂತರ ಅವರನ್ನು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿ ಗೆದ್ದರು. ಅವರು ಇನ್ನೂ ಎರಡೂವರೆ ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯಲಿದ್ದಾರೆ.

SCROLL FOR NEXT