ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜಕೀಯ

ಲೋಕಸಭಾ ಚುನಾವಣೆ ಅಖಾಡಕ್ಕಿಳಿಯಲು ಸಚಿವರ ಹಿಂದೇಟು; ಕರ್ನಾಟಕ ಕಾಂಗ್ರೆಸ್‌ಗೆ ಕಗ್ಗಂಟಾದ ಅಭ್ಯರ್ಥಿಗಳ ಆಯ್ಕೆ!

Ramyashree GN

ಬೆಂಗಳೂರು: ಕರ್ನಾಟಕದ ಕೆಲವು ಸಚಿವರು ಮತ್ತು ಶಾಸಕರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗದಿರುವುದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದು, 'ಗೆಲ್ಲುವ' ಅಭ್ಯರ್ಥಿಗಳ ಹುಡುಕಾಟ ಮುಂದುವರಿದಿದೆ. ರಾಜ್ಯದ ಬಹುಪಾಲು ಸ್ಥಾನಗಳಿಗೆ ಸ್ಪರ್ಧಿಗಳನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ.

ಕಾಂಗ್ರೆಸ್ ಏಳು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿ ಹತ್ತು ದಿನಗಳು ಕಳೆದಿವೆ. ಉಳಿದ 21 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಮಾರ್ಚ್ ಎಂಟರಂದು ಬಿಡುಗಡೆಯಾದ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಯಾವುದೇ ಸಚಿವರು ಮತ್ತು ಶಾಸಕರ ಹೆಸರು ಇರಲಿಲ್ಲ.

ಪಕ್ಷದ ಮೂಲಗಳ ಪ್ರಕಾರ, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟವು ಕಷ್ಟವಾಗಿದ್ದು, ಕಾಂಗ್ರೆಸ್ ನಾಯಕತ್ವವು ಕೆಲವು ಸಚಿವರು ಮತ್ತು ಶಾಸಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮನವೊಲಿಸಲು ಪ್ರಯತ್ನಿಸುತ್ತಿದೆ.

ಏಳರಿಂದ ಎಂಟು ಸಚಿವರನ್ನು ಕಣಕ್ಕಿಳಿಸಲು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಗೃಹ ಸಚಿವ ಜಿ ಪರಮೇಶ್ವರ ಇತ್ತೀಚೆಗೆ ಹೇಳಿದ್ದರು.

ಕೆಲವು ಸಚಿವರು ತಮ್ಮ ಸ್ಪರ್ಧೆಗೆ ಬದಲಾಗಿ ತಮ್ಮ ಕುಟುಂಬದ ಸದಸ್ಯರ ಉಮೇದುವಾರಿಕೆಗೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರು ಮತ್ತು ಶಾಸಕರ ಸಂಬಂಧಿಕರನ್ನು ಕಣಕ್ಕಿಳಿಸಿದರೆ ಅದರಿಂದ ಪಕ್ಷದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಪಕ್ಷದ ನಾಯಕತ್ವವು ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ನಾಯಕತ್ವಕ್ಕೆ ಈಗ ಸಚಿವರು ಅಥವಾ ಅವರ ಕುಟುಂಬ ಸದಸ್ಯರನ್ನು ಕಣಕ್ಕಿಳಿಸುವ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಬಿಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು (ಶನಿವಾರ) ಕೊನೆಗೊಂಡಿದೆ. ನಾಳೆ ಇಂಡಿಯಾ ಮೈತ್ರಿಕೂಟದ ನಾಯಕರ ಸಾರ್ವಜನಿಕ ಸಭೆ ಇದೆ ಮತ್ತು ಮಾರ್ಚ್ 19ರಂದು ನಮ್ಮ ಸಭೆ (ಅಭ್ಯರ್ಥಿಗಳನ್ನು ಅಂತಿಮಗೊಳಿಸಲು) ಇದೆ. ಮಾರ್ಚ್ 19 ರಾತ್ರಿ ಅಥವಾ 20 ರಂದು ಬೆಳಿಗ್ಗೆ ನಮ್ಮ ಎಲ್ಲಾ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.

ಮೂಲಗಳ ಪ್ರಕಾರ, ಚಾಮರಾಜನಗರದಿಂದ ಎಚ್‌ಸಿ ಮಹದೇವಪ್ಪ, ಕೋಲಾರದಿಂದ ಕೆಎಚ್ ಮುನಿಯಪ್ಪ, ಬಳ್ಳಾರಿಯಿಂದ ಬಿ ನಾಗೇಂದ್ರ, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಬೀದರ್‌ನಿಂದ ಈಶ್ವರ್ ಖಂಡ್ರೆ, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಉತ್ಸುಕವಾಗಿದೆ ಎನ್ನಲಾಗಿದೆ.

ಬಹುತೇಕ ಈ ಎಲ್ಲಾ ಸಚಿವರು ಚುನಾವಣೆಯಲ್ಲಿ ಹೋರಾಡಲು ಹಿಂದೇಟು ಹಾಕುತ್ತಿದ್ದಾರೆ ಮತ್ತು ಕೆಲವರು ತಮ್ಮ ಕುಟುಂಬ ಸದಸ್ಯರ ಹೆಸರನ್ನು ಸೂಚಿಸಿದ್ದಾರೆ. ಅಲ್ಲದೆ, ಅವರ ಗೆಲುವನ್ನು ತಾವೇ ಖಚಿತಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೃಷ್ಣ ಬೈರೇಗೌಡರು ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. ಅವರು 2019ರಲ್ಲಿ ಬೆಂಗಳೂರು ಉತ್ತರದಿಂದ ಮತ್ತು 2009ರಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿ ಸೋತಿದ್ದರು.

ಮಹದೇವಪ್ಪ ಅವರು ತಮ್ಮ ಪುತ್ರ ಸುನೀಲ್ ಬೋಸ್‌ಗೆ ಚಾಮರಾಜನಗರದಿಂದ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ರಾಜ್ಯ ರಾಜಕೀಯಕ್ಕೆ ಮರಳಿದ ಏಳು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವರಾಗಿರುವ ಮತ್ತೋರ್ವ ಹಿರಿಯ ಸಚಿವ ಮುನಿಯಪ್ಪ ಅವರು ತಮ್ಮ ಅಳಿಯ ಶಶಿಧರ್ ಜೆಇ ಅವರನ್ನು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅದೇ ರೀತಿ ಚಿಕ್ಕೋಡಿಗೆ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಬೆಳಗಾವಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಬಳ್ಳಾರಿಗೆ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಬೀದರ್‌ಗೆ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಹೆಸರು ಕೇಳಿಬರುತ್ತಿದೆ.

ಕಾಂಗ್ರೆಸ್ ಆರಂಭದಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ಸಚಿವರಿಗೆ ನೀಡಿತ್ತು. ಆದರೆ, ಅವರಿಂದ ಸ್ವೀಕರಿಸಿದ ವರದಿಗಳು ತೃಪ್ತಿಕರವಾಗಿಲ್ಲ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಲು ಪಕ್ಷವು ಮತ್ತೊಂದು ಸಮೀಕ್ಷೆಯನ್ನು ನಿಯೋಜಿಸಲು ನಿರ್ಧರಿಸಿದೆ ಎಂದು ಶಿವಕುಮಾರ್ ಹೇಳಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಸೋಲು ಕಂಡಿದ್ದರಿಂದ ಅನೇಕ ಹಿರಿಯ ನಾಯಕರು ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಬಿಜೆಪಿ ಈಗಾಗಲೇ 20 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು ಎಂಟು ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಬೇಕಿದ್ದು, ಈ ಪೈಕಿ ಮೂರು ಕ್ಷೇತ್ರಗಳಾದ ಮಂಡ್ಯ, ಹಾಸನ ಮತ್ತು ಕೋಲಾರವನ್ನು ಮೈತ್ರಿಕೂಟದ ಪಾಲುದಾರ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವ ಸಾಧ್ಯತೆ ಇದೆ.

ಕರ್ನಾಟಕವು ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

SCROLL FOR NEXT