ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್ 
ರಾಜಕೀಯ

ಬಿಜೆಪಿಯಿಂದ ಸಿ.ಎನ್.ಮಂಜುನಾಥ್ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಆತ್ಮಹತ್ಯೆ ಯತ್ನ: ಡಿ ಕೆ ಶಿವಕುಮಾರ್

Lingaraj Badiger

ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಅಳಿಯ ಡಾ. ಸಿ ಎನ್ ಮಂಜುನಾಥ್ ಅವರನ್ನು ಬಿಜೆಪಿ ಟಿಕೆಟ್‌ ನಲ್ಲಿ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಖ್ಯಾತ ಹೃದ್ರೋಗ ತಜ್ಞ ಹಾಗೂ ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಮಂಜುನಾಥ್ ಅವರಿಗೆ ಬಿಜೆಪಿ ಬೆಂಗಳೂರು ಗ್ರಾಮಂತರ ಕ್ಷೇತ್ರದಿಂದ ಟಿಕೆಟ್ ನೀಡಿದೆ.

ಡಿಕೆ ಶಿವಕುಮಾರ್ ಅವರ ಸಹೋದರ ಹಾಗೂ ಹಾಲಿ ಸಂಸದ ಡಿ ಕೆ ಸುರೇಶ್ ವಿರುದ್ಧ ಮಂಜುನಾಥ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಎರಡು ಸ್ಥಾನಕ್ಕಾಗಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕಿತ್ತೆ ಎಂಬ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಇದನ್ನು ನಿರೀಕ್ಷಿಸಿದ್ದೆ. ಬಿಜೆಪಿ ಜತೆಗಿನ ಮೈತ್ರಿಯಿಂದ ಜೆಡಿಎಸ್ ಮುಜುಗರಕ್ಕೀಡಾಗಿದೆ ಎಂದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, "ಬಿಜೆಪಿಯು ಇತರ ರಾಜ್ಯಗಳಲ್ಲಿಯೂ ತನ್ನ ಮಿತ್ರ ಪಕ್ಷಗಳಿಗೆ ಈ ರೀತಿ ಮಾಡುತ್ತಿದೆ. ಇದು ಅವರ ಆಂತರಿಕ ವಿಷಯ. ಅವರೇ ನಿರ್ಧರಿಸಲಿ". ಆದರೆ ಡಾ.ಮಂಜುನಾಥ್‌ ಅವರನ್ನು ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕಿಳಿಸುವ ಮೂಲಕ ಜೆಡಿಎಸ್‌ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದರು.

ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, 'ರಾಜಕಾರಣಿಗಳು ಟಿಕೆಟ್ ನಿರಾಕರಿಸಿದಾಗ ಬೇರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವುದು ಸಹಜ. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಯಾರೇ ಬಂದರೂ ನಾವು ಸ್ವಾಗತಿಸುತ್ತೇವೆ ಎಂದರು.

ಸದಾನಂದಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತೀರಾ? ಎಂಬ ಪ್ರಶ್ನೆಗೆ, ಆ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

SCROLL FOR NEXT