ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)
ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ) 
ರಾಜಕೀಯ

ಟಿಕೆಟ್ ಕೈತಪ್ಪಿದ್ದಕ್ಕೆ BJPಯಲ್ಲಿ ಹಲವರ ಅಸಮಾಧಾನ: ದೆಹಲಿ ತೆರಳಿದ BSY, ಬಂಡಾಯ ನಾಯಕರ ಕುರಿತು ಚರ್ಚೆ ಸಾಧ್ಯತೆ!

Manjula VN

ಬೆಂಗಳೂರು: ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿಯ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲ ನಾಯಕರು ಕಾಂಗ್ರೆಸ್ ನತ್ತ ಮುಖ ಮಾಡಿರುವ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ದೆಹಲಿಗೆ ತೆರಳಿದ್ದಾರೆ.

ಯಡಿಯೂರಪ್ಪ ಅವರು ಇಂದು ನಡೆಯಲಿರುವ ಸಿಇಸಿ ಸಭೆಯಲ್ಲಿ ಭಾಗವಹಿಸಲಿದ್ದು, ರಾಜ್ಯದ ಉಳಿದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸೋಮವಾರ ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅವರ ರ್ಯಾಲಿ ನಂತರ ಯಡಿಯೂರಪ್ಪ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಲು ನಿರ್ಧರಿಸಿದ್ದರು ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುದಾಗಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಸದಾನಂದಗೌಡ ಕೂಡ ಟಿಕೆಟ್ ಸಿಗದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಇದರ ಬೆನ್ನಲ್ಲೇ ಮೈತ್ರಿಕೂಟದ ಪಾಲುದಾರನಾಗಿರುವ ಜೆಡಿಎಸ್ ಕೂಡ ಸೀಟು ಹಂಚಿಕೆ ವಿಳಂಬವಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಿ ಅಂತಿಮದ ವೇಳೆ ತಮ್ಮನ್ನು ವಿಶ್ವಾಸಕ್ಕ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಅಸಮಾಧಾನ ಬೆನ್ನಲ್ಲೇ ದೆಹಲಿ ತೆರಳಲು ಯಡಿಯೂರಪ್ಪ ಅವರು ನಿರ್ಧರೀಸಿದ್ದು, ದೆಹಲಿ ಭೇಟಿಗೂ ಮುನ್ನ ಬಿಜೆಪಿಯ ಹಿರಿಯ ನಾಯಕ ಗೋವಿಂದ್ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಇತರರೊಂದಿಗೆ ಮಹತ್ವದ ಸಭೆ ನಡೆಸಿ, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ, ದೆಹಲಿ ಭೇಟಿ ವೇಳೆ ವರಿಷ್ಠರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲಿದ್ದಾರೆ. ಅವರ ಸೂಚನೆಯ ಆಧಾರದ ಮೇಲೆ ಕ್ರಮಗಳ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT