ಶಿವರಾಜ್ ಕುಮಾರ್ ಸಾಂದರ್ಭಿಕ ಚಿತ್ರ
ಶಿವರಾಜ್ ಕುಮಾರ್ ಸಾಂದರ್ಭಿಕ ಚಿತ್ರ 
ರಾಜಕೀಯ

ಪತ್ನಿ ಗೀತಾ ಪರ ಪ್ರಚಾರ: ನಟ ಶಿವರಾಜ್ ಕುಮಾರ್ ಚಿತ್ರ, ಜಾಹೀರಾತು ನಿಷೇಧಿಸಿ; ಆಯೋಗಕ್ಕೆ ಬಿಜೆಪಿ ದೂರು

Nagaraja AB

ಬೆಂಗಳೂರು: ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅಖಾಡಕ್ಕಿಳಿದಿದ್ದು, ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಭದ್ರಾವತಿ ಮತ್ತಿತರ ಕಡೆಗಳಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದು, ಪತ್ನಿ ಗೀತಾ ಅವರ ಪರವಾಗಿ ಶಿವರಾಜ್ ಕುಮಾರ್ ಕೂಡಾ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.

ಪತ್ನಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ಒಬಿಸಿ ಯುವ ಮೋರ್ಚಾ ಚುನಾವಣಾ ಆಯೋಗದಲ್ಲಿ ದೂರು ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಪತ್ನಿ ಪರ ಪ್ರಚಾರ ಮಾಡುತ್ತಿರುವ ನಟ ಶಿವರಾಜ್ ಕುಮಾರ್ ಅವರ ಭಾವಚಿತ್ರವುಳ್ಳ ಫ್ಲೆಕ್ಸ್, ಸಿನಿಮಾ ಫೋಸ್ಟರ್, ಜಾಹೀರಾತುಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಶಿವರಾಜ್ ಕುಮಾರ್, ರಾಜ್ಯದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಪ್ರಸ್ತುತ ಕಾಂಗ್ರೆಸ್ ಪಕ್ಷದ ಪರ ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.ಅವರ ಸಿನಿಮೀಯಕೆಲಸ ಮತ್ತು ಸಾರ್ವಜನಿಕ ವ್ಯಕ್ತಿತ್ವದ ಮೂಲಕ ಗಮನಾರ್ಹ ಪ್ರಭಾವ ಬೀರುವವರಾಗಿದ್ದಾರೆ. "ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವರ ಹಕ್ಕನ್ನು ನಾವು ಗೌರವಿಸುತ್ತೇವೆ ಆದರೆ, ಚುನಾವಣಾ ಅವಧಿಯಲ್ಲಿ ಅನಗತ್ಯ ಲಾಭ ಅಥವಾ ಪ್ರಭಾವವನ್ನು ತಡೆಯುವುದು ಕಡ್ಡಾಯವಾಗಿದೆ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಆರ್ ರಘು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಶಿವರಾಜ್ ಕುಮಾರ್ ಅವರ ಜನಪ್ರಿಯತೆ ಹಾಗೂ ಗಮನಾರ್ಹ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು, ಚಿತ್ರಮಂದಿರಗಳು, ಟಿವಿ ಚಾನೆಲ್‌ಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಯಾವುದೇ ಚಲನಚಿತ್ರಗಳು, ಜಾಹೀರಾತುಗಳು ಅಥವಾ ಜಾಹೀರಾತು ಫಲಕವನ್ನು ಚುನಾವಣೆ ಮುಕ್ತಾಯದವರೆಗೂ ಪ್ರದರ್ಶಿಸದಂತೆ ಆದೇಶವನ್ನು ಹೊರಡಿಸುವ ಮೂಲಕ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ದೂರಿನ ಕುರಿತು ಪರಿಶೀಲಿಸುತ್ತಿದ್ದೇವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪತ್ನಿ ಗೀತಾ ಶಿವರಾಜ್​ಕುಮಾರ್ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದು ಅವರ ಪತ್ನಿಗೆ ಸಾಥ್ ನೀಡುತ್ತಿರುವ ಶಿವರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದ ಚಲನಚಿತ್ರ ನಿರ್ಮಾಪಕರು ಬೆಂಬಲವಾಗಿ ನಿಂತಿದ್ದಾರೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಲು ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ.

SCROLL FOR NEXT