ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಪ್ರಿಯಾಂಕಾ ಜಾರಕಿಹೊಳಿ
ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಪ್ರಿಯಾಂಕಾ ಜಾರಕಿಹೊಳಿ 
ರಾಜಕೀಯ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರೋಚಕ ಹಣಾಹಣಿ: ಕಾಂಗ್ರೆಸ್-ಬಿಜೆಪಿ ಪ್ಲಸ್ & ಮೈನಸ್ ಪಾಯಿಂಟ್ ಗಳೇನು?

Shilpa D

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕುತೂಹಲಕಾರಿ ಹಣಾಹಣಿ ಏರ್ಪಟ್ಟಿದ್ದು, ಎರಡೂ ಪಕ್ಷಗಳು ರಾಜಕೀಯವಾಗಿ ಪ್ರಬಲವಾಗಿರುವ ಎರಡು ಕುಟುಂಬಗಳ ಸದಸ್ಯರನ್ನು ಕಣಕ್ಕಿಳಿಸಿದೆ. ಇಂತಹ ದೊಡ್ಡ ಚುನಾವಣೆಗಳಲ್ಲಿ ಹಿರಿಯರನ್ನು ಕಣಕ್ಕಿಳಿಸುವ ಸಂಪ್ರದಾಯ ಮುರಿದಿರುವ ಕಾಂಗ್ರೆಸ್ ಈ ಬಾರಿ 26 ವರ್ಷದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿದೆ. ಒಂದು ವೇಳೆ ಅವರು ಗೆದ್ದರೆ ಅವರು ದೇಶದ ಕಿರಿಯ ಸಂಸದರಲ್ಲಿ ಒಬ್ಬರಾಗಲಿದ್ದಾರೆ.

PWD ಸಚಿವ ಮತ್ತು KPCC ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರಿ, ಪ್ರಿಯಾಂಕಾ 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ವಿರುದ್ಧ 1.17 ಲಕ್ಷ ಮತಗಳ ಅಂತರದಿಂದ ಗೆದ್ದ ಬಿಜೆಪಿಯ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಎದುರಿಸಲಿದ್ದಾರೆ.

ಬಹುಕಾಲದಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ (2 ಎಸ್‌ಸಿ-ಮೀಸಲು, 1 ಎಸ್‌ಸಿ) ಹರಡಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ದೊಡ್ಡ ಭಾಗದ ಮತಗಳು ನಿರ್ಣಾಯಕವಾಗುತ್ತವೆ. ಚಿಕ್ಕೋಡಿಯಲ್ಲಿ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಜನಪ್ರಿಯ ನಾಯಕರಾಗಿ ಅಣ್ಣಾ ಸಾಹೇಬ್ ಜೊಲ್ಲೆ ಹೊರಹೊಮ್ಮಿದ್ದಾರೆ. ಅವರು ಸಹಕಾರಿ ಸಂಘಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಹಲವಾರು ಘಟಕಗಳನ್ನು ನಡೆಸುವ ಜನಪ್ರಿಯ ಜೊಲ್ಲೆ ಗ್ರೂಪ್ ಆಫ್ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ. ಮಾಜಿ ಸಚಿವೆಯಾಗಿರುವ ಅವರ ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿ ಶಾಸಕರಾಗಿದ್ದು, ಕ್ಷೇತ್ರದಾದ್ಯಂತ ತಳಮಟ್ಟದ ಜನರೊಂದಿಗೆ ಕುಟುಂಬ ಉತ್ತಮ ಸಂಪರ್ಕ ಹೊಂದಿದ್ದಾರೆ.

ಮೋದಿ ಫ್ಯಾಕ್ಟರ್’ ಮತ್ತು ಚಿಕ್ಕೋಡಿಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರ ಮುಂಬರುವ ಸರಣಿ ರ್ಯಾಲಿಗಳು ಅವರಿಗೆ ಸಹಾಯ ಮಾಡಲಿವೆ. ಆದರೆ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಪಕ್ಷದ ಹಲವಾರು ಪ್ರಮುಖ ಟಿಕೆಟ್ ಆಕಾಂಕ್ಷಿಗಳು ಜೊಲ್ಲೆ ಪರ ಪ್ರಚಾರ ನಡೆಸದಿರುವ ಸಾಧ್ಯತೆಗಳಿವೆ. ಹೀಗಾಗಿ ಅವರನ್ನು ಸಮಾಧಾನಪಡಿಸಲು ವರಿಷ್ಠರು ಪ್ರಯತ್ನಿಸುತ್ತಿದ್ದಾರೆ.

ಮತ್ತೊಂದೆಡೆ, ಕಳೆದ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಸಾಧಿಸಿರುವ ಕಾಂಗ್ರೆಸ್ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ. ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಭಾರೀ ಬೆಂಬಲ ಪಡೆದಿದ್ದಾರೆ.

ಗಡಿ ಪ್ರದೇಶದ ಮರಾಠಿ ಜನರೊಂದಿಗೆ ಅವರ ಸಂಪರ್ಕವಿದೆ, ಇದು ಜಾರಕಿಹೊಳಿ ಮಗಳಿಗೆ ಹೆಚ್ಚುವರಿ ಪ್ರಯೋಜನವಾಗಿದೆ. ಅವರ ಇಬ್ಬರು ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಹಾಲಿ ಶಾಸಕರಾಗಿರುವುದರಿಂದ ಅನೇಕ ಸಾಂಪ್ರದಾಯಿಕ ಬಿಜೆಪಿ ಮತಗಳು ಕಾಂಗ್ರೆಸ್ ಗೆ ಹೋಗುವ ಸಾಧ್ಯತೆಯೂ ಇದೆ. ಆದರೆ, ವಿಶೇಷವಾಗಿ ಕುರುಬ ಸಮುದಾಯದ ಹಿರಿಯ ನಾಯಕರಿಗೆ ಪಕ್ಷದ ಟಿಕೆಟ್ ನಿರಾಕರಿಸಿರುವುದು ಕಾಂಗ್ರೆಸ್ ಪಕ್ಷದ ಕುರುಬ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

1967 ರಿಂದ ಆರಂಭವಾದ ಒಂಬತ್ತು ಚುನಾವಣೆಗಳಲ್ಲಿ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ದಿವಂಗತ ಬಿ ಶಂಕರಾನಂದ್ ಅವರನ್ನು ಕಣಕ್ಕಿಳಿಸಿತು, ಅವರು ಏಳು ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಭಾರತೀಯ ರಾಜಕೀಯ ಇತಿಹಾಸಗಲ್ಲಿ ದಾಖಲೆ ಸೃಷ್ಟಿಸಿದರು. ಆದರೆ ಅವರು ತಮ್ಮ ಎಂಟನೇ ಮತ್ತು ಒಂಬತ್ತನೇ ಚುನಾವಣೆಗಳಲ್ಲಿ ಸೋತರು.

ಚಿಕ್ಕೋಡಿಯಲ್ಲಿ 1957 ರಿಂದ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ, ಕ್ಷೇತ್ರದಲ್ಲಿ 10 ಚುನಾವಣೆಗಳಲ್ಲಿ ಎರಡು ಕುಟುಂಬಗಳು ಮಾತ್ರ ಸಂಸದ ಸ್ಥಾನವನ್ನು ಪಡೆದಿವೆ, ರಮೇಶ ಜಿಗಜಿಣಗಿ ಸತತ ಮೂರು ಬಾರಿ (1998, 1999, 2004) ಮತ್ತು ಶಂಕರಾನಂದ ಏಳು ಬಾರಿ ಗೆದ್ದಿದ್ದಾರೆ. 2004ರವರೆಗೆ ಎಸ್‌ಸಿ ಮೀಸಲಾಗಿದ್ದ ಕ್ಷೇತ್ರವನ್ನು 2009ರ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಯಿತು.

ದಾಖಲೆಗಳ ಪ್ರಕಾರ ಚಿಕ್ಕೋಡಿ ಕ್ಷೇತ್ರದಲ್ಲಿ ಶಂಕರಾನಂದ ಮತ್ತು ಜಿಗಜಿಣಗಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳೆಂದರೆ 1957ರಲ್ಲಿ ದತ್ತಕಟ್ಟಿ (ಎಸ್‌ಸಿ ಫೆಡರೇಷನ್), 1962ರಲ್ಲಿ ವಿಎಲ್ ಪಾಟೀಲ್ (ಕಾಂಗ್ರೆಸ್), 2009ರಲ್ಲಿ ರಮೇಶ ಕತ್ತಿ (ಬಿಜೆಪಿ), 2014ರಲ್ಲಿ ಪ್ರಕಾಶ ಹುಕ್ಕೇರಿ (ಕಾಂಗ್ರೆಸ್) ಮತ್ತು 2019 ರಲ್ಲಿ ಅಣ್ಣಾಸಾಹೇಬ ಜೊಲ್ಲೆ ಪ್ರಮುಖರಾಗಿದ್ದಾರೆ.

SCROLL FOR NEXT