ಆರ್ ಅಶೋಕ
ಆರ್ ಅಶೋಕ 
ರಾಜಕೀಯ

ಕರ್ನಾಟಕ ಲೋಕಸಭಾ ಚುನಾವಣೆ 2024: ಕಾಂಗ್ರೆಸ್ ಸೋಲುವ ಭಯದಲ್ಲಿದೆ- ಆರ್ ಅಶೋಕ

Ramyashree GN

ಬೆಂಗಳೂರು: ರಾಜ್ಯದ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಲು ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು.

ಸಭೆಯ ನಂತರ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, 'ನಾವು ಚುನಾವಣಾ ಕಾರ್ಯತಂತ್ರ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ರ್‍ಯಾಲಿಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಿದ್ದೇವೆ. ಇದರಿಂದ ನಾವು ಬೆಂಗಳೂರು ಪ್ರದೇಶದಲ್ಲಿ 4 ಕ್ಷೇತ್ರಗಳನ್ನು ಗೆಲ್ಲಬಹುದು ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, 'ಸಹಜವಾಗಿ ಅವರು (ಡಿಕೆ ಸುರೇಶ್) ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಅವರು (ಕಾಂಗ್ರೆಸ್) ಭಯದಲ್ಲಿದ್ದಾರೆ. ಅವರು ಈ ಬಾರಿ ಕುಕ್ಕರ್ ಮತ್ತು ಎಲ್ಲವನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ 28 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದು ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಅವರು ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಇದು ಲೋಕಸಭೆ ಚುನಾವಣೆಯಲ್ಲಿ ಗೆಲುವು ಅವರಿಗೆ ಸುಲಭವಲ್ಲ ಮತ್ತು ಬಿಜೆಪಿ ಬೆಂಗಳೂರು ಗ್ರಾಮಾಂತರವನ್ನು ಗೆಲ್ಲಲಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಸೋಮವಾರ ನಡೆದ ಜಂಟಿ ಸಮನ್ವಯ ಸಭೆಯಲ್ಲಿ ಎರಡು ಮಿತ್ರಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ಎರಡು ದಿನಗಳ ನಂತರ ಸಭೆ ನಡೆದಿದೆ.

ಬಿಜೆಪಿ-ಜೆಡಿಎಸ್ ಮೈತ್ರಿಯು ಈ ತಿಂಗಳ ಆರಂಭದಲ್ಲಿ ಮೂರು ಸ್ಥಾನಗಳಿಗೆ ತಮ್ಮ ಸೀಟು ಹಂಚಿಕೆಯನ್ನು ಘೋಷಿಸಿತು. ಒಪ್ಪಂದದ ಪ್ರಕಾರ, ಜೆಡಿಎಸ್ ಮಂಡ್ಯ, ಕೋಲಾರ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಲಿದ್ದು, ಕೋಲಾರ ಕ್ಷೇತ್ರಕ್ಕೆ ಪಕ್ಷ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಗುರುವಾರ ನಾಮಪತ್ರ ಸಲ್ಲಿಸಿದರು.

28 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆ ಜೂನ್ 4 ರಂದು ನಡೆಯಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಡಿದ್ದವು. ಆಗ ಬಿಜೆಪಿ ದಾಖಲೆಯ 25 ಸ್ಥಾನಗಳನ್ನು ಗೆದ್ದಿತ್ತು; ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಮಾತ್ರ ಗೆದ್ದಿದ್ದವು.

SCROLL FOR NEXT