ಬಿಜೆಪಿ
ಬಿಜೆಪಿ 
ರಾಜಕೀಯ

ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಯತೀಂದ್ರ, ತಂಗಡಗಿ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

Manjula VN

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.

ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯ ಹಾಗೂ ಮೇಲ್ಮನೆ ಸದಸ್ಯ ರವಿಕುಮಾರ್‌ ಮತ್ತು ಛಲವಾದಿ ನಾರಾಯಣಸ್ವಾಮಿ ಈ ಸಂಬಂಧ ಶುಕ್ರವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರು. ದೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಉಲಲಂಘಿಸಿದ ಇಬ್ಬರು ನಾಯಕರನ್ನು ಪ್ರಚಾರ ನಡೆಸದಂತೆ ನಿರ್ಬಂಧ ಹೇರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಚುನಾವಣಾ ಆಯೋಗಕ್ಕೆ ದೂರು ಬಳಿಕ ಮಾತನಾಡಿದ ಪರಿಷತ್ ಸದಸ್ಯ ಎನ್.ರವಿಕುಮಾರ್, ''ಮಾರ್ಚ್​ 28ರಂದು ಸಿದ್ದರಾಮಯ್ಯ ಅವರ ಪುತ್ರ, ಯತೀಂದ್ರ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ವೈಯಕ್ತಿಕ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಗೂಂಡಾ ಇದ್ದಾರೆ, ಕೊಲೆಗಡುಕರಿದ್ದಾರೆ ಅಂತ ಹೇಳಿದ್ದು, ಆ ಆರೋಪವನ್ನು ಅವರು ಪ್ರೂವ್ ಮಾಡಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ ಎಂದು ತಿಳಿಸಿದರು.

ಗೃಹ ಸಚಿವ ಹಾಗೂ ಪ್ರಧಾನಿ ಬಗ್ಗೆ ನಿಂದನೀಯ ಪದ ಬಳಕೆ ಖಂಡನೀಯ. ಈ ಬಗ್ಗೆ ದೂರು ನೀಡಿದ್ದೇವೆ.153a, 153b, 171c, 295a, 505(2) ಈ ಸೆಕ್ಷನ್ ಉಲ್ಲಂಘನೆ ಮಾಡಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಯತೀಂದ್ರ ಸಿದ್ದರಾಮಯ್ಯ ಮೊದಲ ಬಾರಿ ಮಾತನಾಡಿದ್ದಾರೆ. ಈ ಹಿಂದೆ ಈ ರೀತಿ ಮಾತನಾಡಿದವರ ವಿರುದ್ಧ ಕ್ರಮ ಆಗಿದೆ. ಇವರ ವಿರುದ್ಧ ಕ್ರಮ ಆಗಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಿದ್ದೇವೆ'' ಎಂದು ಎಚ್ಚರಿಸಿದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜಾಜಿನಗರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಟೇಡಿಯಂ ಇದೆ. ಅದರೊಳಗೆ ವಾಜಪೇಯಿ ಅವರ ಪುತ್ಥಳಿ ಇದೆ. ಅದನ್ನ ಬಟ್ಟೆಯಿಂದ ಮುಚ್ಚಿಟ್ಟಿದ್ದಾರೆ. ಮಂತ್ರಿ ಮಾಲ್ ಮುಂದೆ ರಾಜೀವ್ ಗಾಂಧಿ ದೊಡ್ಡ ಸ್ಟ್ಯಾಚು ಇದೆ. ಅದನ್ನು ಹಾಗೆಯೇ ಬಿಡಲಾಗಿದೆ. ಇದು ಕಾಂಗ್ರೆಸ್ ದುರಾಡಳಿತದ ರೀತಿ ಇದೆ. ಈ ಬಗ್ಗೆ ದೂರು ನೀಡಿದ್ದೇವೆ ಎಂದರು.

SCROLL FOR NEXT