ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಸೆಕ್ಸ್ ವಿಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ನನ್ನ ಮತ್ತು ನನ್ನ ಕುಟುಂಬದವರ ಎಲ್ಲ ಸದಸ್ಯರ ಮೊಬೈಲ್ ಫೋನ್ ಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸೋಮವಾರ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಫೋನ್ ಕದ್ದಾಲಿಸಲಾಗುತ್ತಿದೆ. ಅಲ್ಲದೇ, ನನ್ನ ಸುತ್ತ ಇರುವ 45 ಜನರ ಮೊಬೈಲ್ ಫೋನ್ ಕದ್ದಾಲಿಸಲಾಗುತ್ತಿದೆ. ನಾನು ಏನು ಮಾತನಾಡುತ್ತೇನೆ ಎಂಬುದೆಲ್ಲ ಡಿಸಿಎಂ ಶಿವಕುಮಾರ್‌ಗೆ ಗೊತ್ತಿದೆ. ನನ್ನ ಕುಟುಂಬದ ಎಲ್ಲ ಸದಸ್ಯರು ಅವರ ಫೋನ್ ಟ್ಯಾಪ್ ಮಾಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಕುಟುಂಬ ಸರ್ವನಾಶ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಎಲ್.ಆರ್. ಶಿವರಾಮೇಗೌಡ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿಕೊಂಡು ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಿರುವ ಆಡಿಯೋ ತುಣುಕು ಬಹಿರಂಗವಾಗಿದೆ. ಶಿವಕುಮಾರ್ ಪಾತ್ರ ಇರುವುದು ಸ್ಪಷ್ಟವಾಗಿದೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಆ ಆಡಿಯೋ ಮತ್ತು ವಿಡಿಯೋ ಅಸಲಿಯತ್ತು ಹೊರ ಬರಬೇಕು ಎಂದು ಆಗ್ರಹಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ನೇಮಿಸದ ಕಾರಣ ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ಕೂಡಾ ನನ್ನ ಕುಟುಂಬವನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಡಿಕೆ ಶಿವಕುಮಾರ್ ಈ ರೀತಿಯ ರಾಜಕೀಯ ಮಾಡಬೇಕಾ?ಎಂದು ಪ್ರಶ್ನಿಸಿದ ಅವರು, ನಾನು ಯಾವುದೇ ರಕ್ಷಣಾತ್ಮಕ ಆಟ ಆಡುತ್ತಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಮಾತಿಗೆ ಬದ್ಧನಾಗಿದ್ದೇನೆ. ಸಂತ್ರಸ್ತ ಮಹಿಳೆಯರು ಮಾನಸಿಕವಾಗಿ ಕುಗ್ಗಬಾರದು. ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿದ್ದರೆ ದಯವಿಟ್ಟು ಅಂಜಬೇಡಿ, ನಾವು ಮನುಷ್ಯತ್ವ ಇಲ್ಲದ ಜನ ಅಲ್ಲ. ಈ ನೆಲದ ಕಾನೂನಿಗೆ ಗೌರವ ನೀಡಬೇಕು. ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ 24 ಗಂಟೆಯಲ್ಲಿ ಅಥವಾ 48 ಗಂಟೆಯಲ್ಲಿ ವಿದೇಶದಿಂದ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಫೋನ್ ಕದ್ದಾಲಿಕೆ ಆರೋಪ ಸುಳ್ಳು: ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಗರಣದ ತನಿಖೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿಲ್ಲ. ಅವರ ಪರಿಸ್ಥಿತಿಯ ಬಗ್ಗೆ ನನಗೆ ಬೇಸರವಾಗಿದೆ ಎಂದು ಅವರು ಹೇಳಿದರು.
ಫೋನ್ ಕದ್ದಾಲಿಕೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಸರ್ಕಾರ ಅಂತಹ "ಮೂರ್ಖತನ" ದ ಕೆಲಸದಲ್ಲಿ ಪಾಲ್ಗೊಳ್ಳುವುದಿಲ್ಲ . ಅವರು ಭಯೋತ್ಪಾದಕರಲ್ಲ. ಫೋನ್ ಕದ್ದಾಲಿಕೆಯನ್ನು ಭಯೋತ್ಪಾದಕರಿಗೆ ಬಳಸಲಾಗುತ್ತದೆ. ಅವರು ರಾಜ್ಯದ ನಾಯಕರು (ದೇವೇಗೌಡರ ಕುಟುಂಬ) ಅವರ ಫೋನ್ ಟ್ಯಾಪ್ ಮಾಡುವವರು ಯಾರು? ಇದು ಸುಳ್ಳು. ಪ್ರಚಾರ ಗಿಟ್ಟಿಸಿಕೊಳ್ಳಲು ಹೀಗೆ ಹೇಳಿದ್ದಾರೆ ಎಂದರು.