ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಸಂಪುಟದಿಂದ ಕೈಬಿಡುವಂತೆ ಪ್ರತಿಪಕ್ಷ ಬಿಜೆಪಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ ಮತ್ತು ರಾಜ್ಯದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ ಎಂದು ದೂರಿದರು.
ಪ್ರತಿನಿತ್ಯ ಹಲವಾರು ಘೋರ ಅಪರಾಧಗಳು ವರದಿಯಾಗುತ್ತಿದ್ದರೂ, ಗೃಹ ಇಲಾಖೆಯು ಯಾವುದೇ ಸುತ್ತೋಲೆ ಹೊರಡಿಸಿ ಸೂಕ್ತ ಕ್ರಮಕೈಗೊಳ್ಳಲು ಠಾಣೆ ಮಟ್ಟದ ಅಧಿಕಾರಿಗಳಿಗೆ ನೀಡಿಲ್ಲ ಎಂದ ಅವರು, ಬಿಜೆಪಿಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪೊಲೀಸ್ ಕ್ರಮದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 70 ಅಧಿಕಾರಿಗಳು ರಾಜಕೀಯ ಕಾರಣಕ್ಕಾಗಿ ಅವರನ್ನು ಬಂಧಿಸಲು ಹೋಗಿದ್ದಾರೆ ಎಂದು ಹೇಳಿದರು.
ಪೂಂಜಾ ಅವರ ಹೇಳಿಕೆಯಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶ ಇಲ್ಲದಿದ್ದರೂ, ಪ್ರತಿಭಟನಾ ರ್ಯಾಲಿಯಲ್ಲಿ ಮಾಡಿದ ಭಾಷಣದ ಭಾಗಗಳನ್ನು ಬಳಸಿಕೊಂಡು ಪೂಂಜಾ ವಿರುದ್ಧ ಕ್ರಮಕೈಗೊಳ್ಳುವ ಸಂಚು ನಡೆದಿದೆ ಎಂದು ಅವರು ಹೇಳಿದರು.