ಬೆಳಗಾವಿಯಲ್ಲಿ ಭಾರೀ ಅಂತರದಲ್ಲಿ ಪಕ್ಷಕ್ಕೆ ಗೆಲುವು ಲಭಿಸುವುದು ಖಚಿತ ಎಂದು ಬೆಳಗಾವು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ಅವರು, ಈ ಬಾರಿ ನನ್ನ ಗೆಲುವಿನ ಅಂತರ ದೊಡ್ಡ ಮಟ್ಟದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸೋತರೆ ಪ್ಲಾನ್ ಬಿ ಇದೆಯಾ?
ಯಾವುದೇ ಪ್ಲಾನ್ ಬಿ ಇಲ್ಲ. ನಾನು ಪಕ್ಷದ ನಿಷ್ಠಾವಂತ ಸೈನಿಕ, ಪಕ್ಷ ಹೇಳಿದಂತೆ ಮಾಡುತ್ತೇನೆ.
ಸೋತಿದ್ದೇ ಆದರೆ, ವಿಧಾನ ಪರಿಷತ್ ಚುನಾವಣೆ ಸ್ಪರ್ಧೆ ಎಂಬ ಗುಸುಗುಸು ಇದೆ?
ಆ ನಿಟ್ಟಿನಲ್ಲಿ ಯಾವುದೇ ಚಿಂತನೆ ಇಲ್ಲ. ಪಕ್ಷ ಏನು ಮಾಡಬೇಕೆಂದು ಹೇಳುತ್ತದೆಯೋ ಅದರ ಮೇಲೆ ನಾನು ಗಮನ ಹರಿಸುತ್ತೇನೆ.
ಹುಬ್ಬಳ್ಳಿ-ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ವಿರುದ್ಧ ಲಿಂಗಾಯತ ಶ್ರೀ ದಿಂಗಾಲೇಶ್ವರ ಸ್ವಾಮಿ ಬಹಿರಂಗ ಪ್ರಚಾರ ನಡೆಸಿದ್ದರ ಬಗ್ಗೆ ಏನು ಹೇಳುತ್ತೀರಿ?
ಲಿಂಗಾಯತರು ಮಾತ್ರವಲ್ಲದೆ ಮರಾಠರು ಮತ್ತು ಇತರ ಜಾತಿ-ಸಮುದಾಯದ ಜನರೂ ಕೂಡ ಬಿಜೆಪಿಯನ್ನು ಬೆಂಬಲಿಸಿದ್ದಾರೆ.
ಲಿಂಗಾಯತರಲ್ಲಿನ ಉಪಜಾತಿಗಳು ಈ ಬಾರಿ ಮುಂಚೂಣಿಗೆ ಬಂದಿದೆ. ಲಿಂಗಾಯತ-ಪಂಚಮಸಾಲಿಗಳು, ಲಿಂಗಾಯತ-ಬಣಜಿಗರು, ಲಿಂಗಾಯತ-ಗಾಣಿಗರು ಮುಂತಾದ ಉಪಜಾತಿಗಳು ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆಯೇ?
ಇಲ್ಲಿ ಉಪಜಾತಿ ಮುಖ್ಯವಲ್ಲ. ಈ ಚುನಾವಣೆ ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ನಾಯಕನನ್ನು ಆಯ್ಕೆ ಮಾಡುವ ಚುನಾವಣೆಯಾಗಿದೆ.
ಮುಸ್ಲಿಂ ಸಮುದಾಯ ಕುರಿತು ಪ್ರಧಾನಿ ಮೋದಿಯವರ ಹೇಳಿಕೆ ಮತ ಧ್ರುವೀಕರಣಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ?
ನೂರು ವರ್ಷಗಳಿಂದ ಮುಸ್ಲಿಮರು ಇಲ್ಲಿ ನೆಲೆಸಿದ್ದಾರೆ ಎಂದು ಕೊಳ್ಳೋಣ. ಇಷ್ಟೂ ವರ್ಷ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಿದ್ದರೆ ಹೇಗೆ? ಇದು ಎಲ್ಲಾ ಮುಸ್ಲಿಮರನ್ನು ಮತ್ತಷ್ಟು ಪ್ರತ್ಯೇಕಿಸಿದಂತಾಗುವುದಿಲ್ಲವೇ? ಮುಸ್ಲಿಮರು ಆ ಮನಸ್ಥಿತಿಯಿಂದ ಹೊರಬರಬೇಕೆಂದು ನಾನು ಬಯಸುತ್ತೇನೆಂದು ಹೇಳಿದರು.