ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀಖಾನ್ ಪಠಾಣ್ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದರು 
ರಾಜಕೀಯ

ಮೂರು ಕ್ಷೇತ್ರಗಳ ಉಪ ಚುನಾವಣೆ: ಅಬ್ಬರಿಸಿ ಬೊಬ್ಬಿರಿದ ನಾಯಕರು; ಪ್ರಚಾರದ ಜೊತೆಗೆ ವಾಗ್ಯುದ್ಧ; ಮತದಾರ ಹೈರಾಣ!

ರಾಜ್ಯದಲ್ಲಿ ವಕ್ಫ್ ಭೂಮಿ, ಮುಡಾ ನಿವೇಶನ ಸಮಸ್ಯೆ ಸೇರಿದಂತೆ ನಾನಾ ವಿಚಾರಗಳಲ್ಲಿ ಪರಸ್ಪರ ನಾಯಕರು ಆರೋಪಗಳಲ್ಲಿ ತೊಡಗಿದ್ದಾರೆ.

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವ್ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ನಡೆಯಲಿರುವ ಉಪ ಚುನಾವಣೆಯ ಪ್ರಚಾರದ ಕಾವು ಜೋರಾಗಿದ್ದು, ಮೂರು ಪಕ್ಷಗಳ ಪ್ರಮುಖ ನಾಯಕರು ತಮ್ಮ ಅಭ್ಯರ್ಥಿಗಳ ಪರ ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ವೈ.ವಿಜಯೇಂದ್ರ ಅವರು ಪ್ರಚಾರದ ರಣಕಹಳೆಯಲ್ಲಿ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಕ್ಫ್ ಭೂಮಿ, ಮುಡಾ ನಿವೇಶನ ಸಮಸ್ಯೆ ಸೇರಿದಂತೆ ನಾನಾ ವಿಚಾರಗಳಲ್ಲಿ ಪರಸ್ಪರ ನಾಯಕರು ಆರೋಪಗಳಲ್ಲಿ ತೊಡಗಿದ್ದಾರೆ.

ಶಿಗ್ಗಾಂವಿಯಲ್ಲಿ ಯಾಸೀರ್ ಅಹಮದ್ ಖಾನ್ ಪಠಾಣ್ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ, ವಕ್ಫ್ ಮಂಡಳಿಯಿಂದ ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆಯಲು ಸರಕಾರ ಆದೇಶ ಹೊರಡಿಸಿದ್ದರೂ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಪುತ್ರ ಬಿಜೆಪಿ ಅಭ್ಯರ್ಥಿ ಭರತ್ ಪರ ಪ್ರಚಾರ ನಡೆಸಿದ್ದು, ಸಿದ್ದರಾಮಯ್ಯ ಅವರು ತಪ್ಪು ಮಾಡಿದ ನಂತರ ಯೂ ಟರ್ನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಡಿ ಕೆ ಶಿವಕುಮಾರ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಾದ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಎಂ.ಸಿ.ಸುಧಾಕರ್, ವೆಂಕಟೇಶ್ ಅವರೊಂದಿಗೆ ಸೋಮವಾರ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ ಪರ ಪ್ರಚಾರ ನಡೆಸಿದರು. ಡಿ ಕೆ ಶಿವಕುಮಾರ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಮಾತಿನ ಸಮರ ಮುಂದುವರಿಸಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣದಿಂದ ಸಿಎಂ ಆದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಜನತೆಯ ಮತ ಕೇಳುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಅವರು ಕ್ಷೇತ್ರವನ್ನು ತೊರೆದರೆ ಒಳ್ಳೆಯದು ಎಂದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಶೇ.90ರಷ್ಟು ಹಳ್ಳಿಗಳಲ್ಲಿ ರಸ್ತೆ ಕಾಂಕ್ರಿಟೀಕರಣ ಸೇರಿದಂತೆ ನಾನು ಮಾಡಿರುವ ಕೆಲಸಗಳು ಜನರ ಕಣ್ಣಿಗೆ ಕಾಣುತ್ತಿವೆ. ಕ್ಷೇತ್ರವನ್ನು ಬಿಡಬೇಕೆ ಬೇಡವೆ ಎಂದು ಚನ್ನಪಟ್ಟಣದ ಜನರು ತೀರ್ಮಾನಿಸುತ್ತಾರೆ. ಶಿವಕುಮಾರ್ ಅವರಿಗೆ ಯಾವ ಪುರಾವೆ ಬೇಕು ‘ಸಾಕ್ಷಿ ಗುಡ್ಡೆ’ಯ ಅರ್ಥವಾದರೂ ಅವರಿಗೆ ಗೊತ್ತಿದೆಯೇ, ಅಕ್ರಮವಾಗಿ ಲೂಟಿ ಮಾಡಿ ವಿದೇಶಕ್ಕೆ ಕಳುಹಿಸಿದ ಬಂಡೆಗಳು ಅವರು ಕೇಳುತ್ತಿರುವ ‘ಪುರಾವೆ’ಯೇ? ರಾಜ್ಯದ ನೈಸರ್ಗಿಕ ಸಂಪತ್ತು ಶೋಷಣೆ ಮತ್ತು ಲೂಟಿಯಾಗಿದೆ ಎಂಬುದಕ್ಕೆ ಸಾಕ್ಷಿ ನೀಡಬೇಕೇ ಎಂದು ಕುಮಾರಸ್ವಾಮಿ ಗುಡುಗಿದರು.

ಕುಮಾರಸ್ವಾಮಿ ಅವರಿಗೆ ಮೋಸ ಮಾಡಿ ತಮ್ಮ ಪುತ್ರ ನಿಖಿಲ್‌ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿಸಿದರು ಎಂದು ಯೋಗೇಶ್ವರ ಆರೋಪಿಸಿದರು. ಗೌಡರ ಕುಟುಂಬದ ವಂಶ ರಾಜಕಾರಣಕ್ಕೆ ಕಡಿವಾಣ ಹಾಕುವಂತೆ ಮತದಾರರನ್ನು ಕೋರಿದರು.

ಇದೇ ವೇಳೆ ಚನ್ನಪಟ್ಟಣದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಭಾವನಾತ್ಮಕವಾಗಿ ಮತ ಕೇಳುತ್ತಿದ್ದು, ಸತತ ಎರಡು ಚುನಾವಣೆಗಳಲ್ಲಿ ಸೋತಿರುವ ತಮಗೆ ಸೇವೆ ಮಾಡಲು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ನನ್ನ ತಂದೆ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡರು ಮಾಡಿರುವ ಕೆಲಸಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು. ಸೋಮವಾರ ನಿಖಿಲ್ ಪರ ಪ್ರಚಾರ ನಡೆಸಬೇಕಿದ್ದ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಆರೋಗ್ಯ ಸರಿಯಿಲ್ಲದ ಕಾರಣ ಇಂದಿಗೆ ಮುಂದೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ನಿಖಿಲ್ ಪತ್ನಿ ರೇವತಿ ಕೂಡ ಚನ್ನಪಟ್ಟಣದಲ್ಲಿ ಅವರ ಪರ ಪ್ರಚಾರ ನಡೆಸಿದರು. ಮಹಿಳೆಯರು ಅವರನ್ನು ಪ್ರಚಾರಕ್ಕೆ ಕರೆತಂದರು. ರೇವತಿ ಅವರ ತಾಯಿ ಕೂಡ ಚನ್ನಪಟ್ಟಣ ತಾಲೂಕಿನ ಸಾಮಂದೀಪುರ ಗ್ರಾಮದವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT