ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ತಲೆಬಿಸಿ ಮಾಡಿಕೊಂಡಿರುವ ಸಿದ್ದರಾಮಯ್ಯಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹೊಸ ತಲೆನೋವು ತಂದಿತ್ತಿದ್ದು, ಜಾತಿಗಣತಿ ವರದಿ ಜಾರಿಗೆ ಒತ್ತಾಯಿಸಿದ್ದಾರೆ.
ಹೌದು.. ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ. ಸರ್ಕಾರ ಏನಾಗತ್ತೋ ಆಗಲಿ ನೋಡೋಣ. ಸಿದ್ದರಾಮಯ್ಯನವರೇ ಜಾತಿ ಗಣತಿ ವರದಿಯನ್ನು ಮೊದಲು ಬಿಡುಗಡೆ ಮಾಡಿ ಎಂದು ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಸರ್ಕಾರ ಬರಲು ಶೋಷಿತ ಸಮುದಾಯಗಳೇ ಕಾರಣ. ಸರ್ಕಾರ ಬಿದ್ದರೆ ಬೀಳಲಿ. ಏಕೆ ಹೆದರಬೇಕು? ಜಾತಿಗಣತಿಯನ್ನ ಮೊದಲು ಬಿಡುಗಡೆ ಮಾಡಿ. ಜಾತಿಗಣತಿ ವರದಿ ಜಾರಿಗೆ ಬರಲಿ. ಜಾತಿಗಣತಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದೆ. ಆದರೆ ಸರ್ಕಾರ ಏಕೆ ಯೋಚನೆ ಮಾಡುತ್ತಿದೆ? ಮೊದಲು ಜಾತಿಗಣತಿ ಜಾರಿ ಮಾಡಲಿ. ಎಲ್ಲ ಸಮುದಾಯಕ್ಕೆ ಅನುಕೂಲ ಇದೆ. ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದರೆ ಹೋಗಲಿ ಎಂದು ಹೇಳಿದರು.
ರಾಹುಲ್ ಗಾಂಧಿ ಬಗ್ಗೆ ಗೌರವ ಇದ್ದವರು ಬೆಂಬಲಿಸುತ್ತಾರೆ: ಡಿಕೆ ಸುರೇಶ್ ಗೆ ಟಾಂಗ್!
ಇದೇ ವೇಳೆ ಜಾತಿಗಣತಿ ಜಾರಿ ಬಗ್ಗೆ ಸರ್ಕಾರ ಎಚ್ಚರದ ನಡೆ ಹಾಕಬೇಕು ಎಂಬ ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಕೆ ಹರಿಪ್ರಸಾದ್, 'ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಣಾಳಿಕೆ ಬಗ್ಗೆ ಗೌರವ ಇರುವವರು ಬೆಂಬಲ ಕೊಡಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಜಾತಿಗಣತಿ ಜಾರಿ ಬಗ್ಗೆ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕೂಡ ಹೇಳಿದ್ದರು.
ರಾಹುಲ್ ಗಾಂಧಿ ಹೇಳಿದ್ರು ಪ್ರಪಂಚ ಬಿದ್ರೂ ಜಾತಿಗಣತಿ ಜಾರಿಯಾಗಬೇಕು ಅಂತ. ಪ್ರಪಂಚ ತಲೆಕೆಳಗಾಗಲಿ, ಜಾತಿಗಣತಿ ಜಾರಿಗೆ ತರಬೇಕು. ಸರ್ಕಾರ ಬಿದ್ರೆ ಬೀಳಲಿ, ಏಕೆ ಹೆದರಬೇಕು. ಸರ್ಕಾರಕ್ಕೆ ಕಂಟಕ ಎದುರಾದ್ರೆ ಆಗಲಿ. ಜಾತಿ ಗಣತಿ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಅಂತೆಯೇ 'ನಮ್ಮ ಸರ್ಕಾರ ಬಂದಿರೋದು ಅಧಿಕಾರ ಅನುಭವಿಸುವುದಕ್ಕಲ್ಲ, ಕಾಂಗ್ರೆಸ್ ಪ್ರಣಾಳಿಕೆ ಓದಿದವರು, ಕಾಂಗ್ರೆಸ್ ಪ್ರಣಾಳಿಕೆ ಮೇಲೆ ನಂಬಿಕೆ ಇರುವವರು ಜಾತಿಗಣತಿ ಬೆಂಬಲಿಸಲಿ' ಎಂದು ಹರಿಪ್ರಸಾದ್ ಹೇಳಿದರು.