ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣವು ಹರಿಯಾಣದಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೋಳಿವಾಡ್, ಹರಿಯಾಣ ಚುನಾವಣಾ ಪ್ರಚಾರದ ವೇಳೆ ಮುಡಾ ಹಗರಣವು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದ ಪ್ರಮುಖ ವಿಷಯವಾಗಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು, ಪದೇ ಪದೇ ಮುಡಾ ಹಗರಣವನ್ನು ಪ್ರಸ್ತಾಪಿಸಿದ್ದು ಪಕ್ಷಕ್ಕೆ ತೀವ್ರ ಹಿನ್ನಡೆಗೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಮತ್ತೆ ಒತ್ತಿ ಹೇಳಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂಬ ನನ್ನ ಹೇಳಿಕೆಯನ್ನು ಹಿಂಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೇನೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದರೆ ನೋಟಿಸ್ ಕೊಡುತ್ತಾರೆ. ಪಕ್ಷದ ಹಿತದೃಷ್ಟಿಯಿಂದ ನಾನು ಈ ಹೇಳಿಕೆ ನೀಡಿದ್ದೆ. ನಾನು ಸಕ್ರಿಯ ರಾಜಕಾರಣದಲ್ಲಿಲ್ಲ, ಆದರೆ ನಾನು ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಕೋಳಿವಾಡ್ ಹೇಳಿದ್ದಾರೆ.
ಹೈಕಮಾಂಡ್ ನನಗೆ ಏಕೆ ಎಚ್ಚರಿಕೆ ನೀಡುತ್ತದೆ? ನಾನು ಹಿರಿಯ ಕಾಂಗ್ರೆಸ್ ನಾಯಕ, ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೇನೆ. ನಾನು ನನ್ನ ಅಭಿಪ್ರಾಯವನ್ನು ನೀಡಿದ್ದೇನೆ ಎಂದು ಅವರು ಹೇಳಿದರು.
ಇದೇ ವೇಳೆ ಜಾತಿ ಗಣತಿ ಕುರಿತ ಕಾಂತರಾಜ್ ಆಯೋಗದ ವರದಿ ಅವೈಜ್ಞಾನಿಕ ಅಂತ ಹೇಳಲು ಆಗಲ್ಲ, ಇದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಲ್ಲ. ಹೀಗಾಗಿ ಅನುಷ್ಠಾವನ್ನು ವಿಳಂಬ ಮಾಡಬಾರದು. ಜಾತಿ ಗಣತಿ ವರದಿ ಅನುಷ್ಠಾನಕ್ಕೆ ನನ್ನ ಬೆಂಬಲವಿದೆ. ಜಾತಿ ಗಣತಿ ನಡೆಯುವಾಗ ಹಲವು ಕಡೆ ಭೇಟಿ ನೀಡಿದ್ದೇನೆ. ಉಪಜಾತಿಗಳ ಬಗ್ಗೆಯೂ ವಿವರ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಪಕ್ಷಕ್ಕೆ ಆಗುವ ಮುಖಭಂಗ ತಪ್ಪಿಸಲು ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ಕೋಳಿವಾಡ್ ಕಳೆದ ಸೆ.26ರಂದು ಹೇಳಿದ್ದರು. ಸಿದ್ದರಾಮಯ್ಯ ಅವರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದು, 136 ಶಾಸಕರ ಬೆಂಬಲವಿದೆ. ಆದರೆ ಮುಡಾದಿಂದ ಕಾಂಗ್ರೆಸ್‌ಗೆ ಮುಖಭಂಗವಾಗುವ ಸಾಧ್ಯತೆ ಇದ್ದು, ಈ ಹಂತದಲ್ಲಿ ರಾಜೀನಾಮೆ ನೀಡಿ ಪಕ್ಷಕ್ಕೆ ನೆರವಾಗುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಕೋಳಿವಾಡ ಹೇಳಿದರು.
ಸಿಎಂ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಕ್ಲೀನ್ ಆಗಿ ಹೊರಬಂದು ಮತ್ತೊಮ್ಮೆ ಸಿಎಂ ಆಗುತ್ತಾರೆ. ಹೀಗಾಗಿ ಪಕ್ಷಕ್ಕೆ ಮುಜುಗರವಾಗಬಾರದು. ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದು ತನಿಖೆ ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.