ಬೆಂಗಳೂರು: ಚನ್ನಪಟ್ಟಣ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ಬಿಜೆಪಿಯ ಮಾಜಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ ಅವರು ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಬಳ್ಳಾರಿ ಕಾಂಗ್ರೆಸ್ ಸಂಸದ ಇ ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಅವರು ನವೆಂಬರ್ 13 ರಂದು ನಡೆಯುವ ಸಂಡೂರು ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರ ವಿರುದ್ಧ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಬುಧವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಎಂಎಲ್ಸಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇದಕ್ಕೂ ಮುನ್ನ ಯೋಗೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಯೋಗೇಶ್ವರ್ ಅಭ್ಯರ್ಥಿಯಾಗಿ ಗುರುವಾರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಘೋಷಿಸಿದ್ದಾರೆ. ಯೋಗೇಶ್ವರ ಅವರು ಸೋಮವಾರ ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದೀಗ ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕೂತೂಹಲ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರ ಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ ಡಿಕೆ ಶಿವಕುಮಾರ್ ಈ ಚುನಾವಣೆಯನ್ನು ವೈಯಕ್ತಿಕ ಯುದ್ಧವೆಂದು ತೆಗೆದುಕೊಂಡಿದ್ದಾರೆ. ಜೆಡಿಎಸ್-ಬಿಜೆಪಿ ಅಚ್ಚರಿ ಅಭ್ಯರ್ಥಿಯಾಗಿ ಡಾ. ಸಿಎನ್ ಮಂಜುನಾಥ್ ಪತ್ನಿ ಅನಸೂಯ ಮಂಜುನಾಥ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಿರೀಕ್ಷೆಯಂತೆ ಅನ್ನಪೂರ್ಣ ಎಸ್‌ಟಿ ಮೀಸಲು ಕ್ಷೇತ್ರವಾದ ಸಂಡೂರಿನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿರುವ ಬಿಜೆಪಿಯ ಬಂಗಾರು ಹನುಮಂತ ವಿರುದ್ಧ ಸ್ಪರ್ಧಿಸಲಿದ್ದಾರೆ.