ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಅಮೆರಿಕದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಮೆರಿಕಗೆ ಕುಟುಂಬದ ಜೊತೆಗೆ ತೆರಳಿದ್ದ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದು, ಕಾಂಗ್ರೆಸ್ ಪಾಳಯದಲ್ಲೂ ಚರ್ಚೆಯನ್ನು ಹುಟ್ಟುಹಾಕಿದೆ.
ಸಿಎಂ ಬದಲಾವಣೆಯ ಕುರಿತಾಗಿ ಹೇಳಿಕೆಗಳು ತೀವ್ರಗೊಳ್ಳುತ್ತಿವೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಾನೂ ಸಿಎಂ ಆಕಾಂಕ್ಷಿ ಎಂದು ಕೆಲವು ಸಚಿವರು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನೊಳಗಿನ ಅವರ ವಿರೋಧಿಗಳು ಮಾತ್ರವಲ್ಲದೆ , ಪ್ರತಿಪಕ್ಷ ಬಿಜೆಪಿ ಕೂಡ ಶಿವಕುಮಾರ್ ಅವರ ಅಮೆರಿಕ ಪ್ರವಾಸದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದೆ, ಆದರೂ ಇದು ವೈಯಕ್ತಿಕ ಭೇಟಿ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಪತ್ನಿ ಉಷಾ, ರಾಹುಲ್ ಗಾಂಧಿ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರ ಜೊತೆಗಿದ್ದ ಪೋಟೋ ಪೋಸ್ಟ್ ಮಾಡಿದ್ದು ಆದರೂ ಊಹಾಪೋಹಗಳಿಗೆ ಪುಷ್ಠಿ ನೀಡುವಂತಿದೆ. "ವಾಷಿಂಗ್ಟನ್ ಡಿಸಿಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ನನ್ನ ಪತ್ನಿ ಉಷಾ ಅವರೊಂದಿಗೆ ಭೇಟಿಯಾಗಿರುವುದು ಅದ್ಭುತವಾಗಿದೆ ಎಂದು ಶಿವಕುಮಾರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಶಿವಕುಮಾರ್ ಅವರ ಪೋಸ್ಟ್‌ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ಡಾ ರಾಧಾ ಮೋಹನ್ ದಾಸ್ ಅಗರವಾಲ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವ್ಯಕ್ತಿ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವಂತೆ ರಾಹುಲ್‌ಗೆ ಮನವರಿಕೆ ಮಾಡಿಕೊಡಲು ಅಮೆರಿಕಕ್ಕೆ ಬಂದಿದ್ದಾರೆ. ರಾಹುಲ್ ಪ್ರಯಾಣಕ್ಕೆ ಮಾತ್ರ ಹಣಕಾಸು ಒದಗಿಸಿದ್ದಾರೆ ಎಂದು ಗೊಣಗುತ್ತಿದ್ದಾರೆ ಡಾ ಅಗರ್ವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಅಮೆರಿಕದಲ್ಲಿ ಭೇಟಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಫೋಟೋಗಳನ್ನು ಗಮನಿಸಿದ್ದೇನೆ. ಡಿಕೆ ಶಿವಕುಮಾರ್ ತಮ್ಮ ಕುಟುಂಬದೊಂದಿಗೆ ಯುಎಸ್ ಪ್ರವಾಸದಲ್ಲಿದ್ದಾರೆ. ಅದೇ ಹೊಟೇಲ್‌ನಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿರಬಹುದು. ಆಕಸ್ಮಿಕವಾಗಿ ರಾಹುಲ್ ಗಾಂಧಿ ಸಿಕ್ಕಾಗ ದೂರ ಹೋಗಲು ಆಗುತ್ತಾ? ಸಿಕ್ಕಾಗ ಮಾತನಾಡಿಸಿದ್ದಾರೆ ಅಷ್ಟೇ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದಿದ್ದಾರೆ.