ಕಲಬುರಗಿ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನನ್ನನ್ನು ರಾಜಕೀಯವಾಗಿ ಮುಗಿಸುವ ಕನಸು ಕಾಣುತ್ತಿದ್ದು, ಇದು ಅವರ ಮೂರ್ಖತನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಅಫಜಲಪುರ ತಾಲೂಕಿನ ಕವಲಗಾ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಬ್ರೀಟಿಷರು ನಮ್ಮ ದೇಶವನ್ನ ಆಳಲು ನಮ್ಮವರೇ ಕಾರಣ, ವ್ಯಾಪಾರಕ್ಕೆಂದು ಬಂದು 200 ವರ್ಷಗಳ ಕಾಲ ಭಾರತವನ್ನ ಆಳಿದ್ದಾರೆ. ಒಬ್ಬರ ಮೇಲೆ ಒಬ್ಬರನ್ನ ಎತ್ತಿಕಟ್ಟಿ ದೇಶವನ್ನೆ ಕೊಳ್ಳೆ ಹೊಡಿದಿರುವವರ ಜೊತೆ, ನಮ್ಮವರು ಕೈಜೋಡಿಸದಿದ್ದರೆ 200 ವರ್ಷ ಆಳೋಕೆ ಆಗುತ್ತಿರಲಿಲ್ಲ. ಆದರೆ ಸಂಗೋಳ್ಳಿ ರಾಯಣ್ಣ ಬ್ರೀಟಿಷರಿಂದ ತಪ್ಪಿಸಿಕೊಂಡು ತಮ್ಮದೇ ಸೈನ್ಯ ಕಟ್ಟಿದ ಬಳಿಕ ಬ್ರಿಟಿಷರಿಗೆ ಸಿಂಹಸ್ವಂಪ್ನವಾಗಿದ್ದರು.
ಬ್ರಿಟಿಷರ ಪಾಲಿಗೆ ಸಿಂಹ ಸ್ಬಪ್ನವಾಗಿದ್ದ, ರಾಯಣ್ಣನನ್ನು ಹಿಡಿಯಲು ಬ್ರಿಟಿಷರಿಗೆ ಸಹಾಯ ಮಾಡಿದ್ದು ನಮ್ಮವರೇ. ಎಲ್ಲಾ ಕಾಲದಲ್ಲೂ ಅಂತಹ ಮನೆ ಮುರುಕರು ಇದ್ದೇ ಇರ್ತಾರೆ. ಹಿಂದೆಯೂ ಇದ್ದರು, ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆಂದು ಹೇಳುವ ಮೂಲಕ ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಮೂಡಾ ಕೇಸ್ ನಲ್ಲಿ ಏನೂ ಇಲ್ಲ. ಆದರು ಬಿಜೆಪಿ ಮತ್ತು ಜೆಡಿಎಸ್‌ನವರು ಸುಳ್ಳು ಆರೋಪ ಮಾಡಿ, ನನನ್ನು ಸಿಲುಕಿಸಬೇಕೆಂದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲಿವರೆಗೆ ರಾಜ್ಯದ ಜನರ ಅಶೀರ್ವಾದವಿರುತ್ತದೆಯೋ ಅಲ್ಲಿವರೆಗೆ ನನ್ನನ್ನು ಏನೂ ಮಾಡಲು ಆಗಲ್ಲ. ನಾನು ಮಂತ್ರಿಯಾಗಿ ನಲವತ್ತು ವರ್ಷವಾಗಿದ್ದು, ಇದುವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ನಲವತ್ತು ವರ್ಷದಿಂದ ಮಾಡದ ತಪ್ಪುನ್ನು ಈಗ ಮಾಡಲು ಹೋಗುತ್ತೇನಾ ಎನ್ನುವ ಮೂಲಕ ಹಿಂದೆಯೂ ತಪ್ಪು ಮಾಡಿಲ್ಲ, ಮುಂದೆಯೂ ತಪ್ಪು ಮಾಡಲ್ಲ ಎಂದು ಹೇಳಿದರು.
ಬಡ ಕುಟುಂಬದಲ್ಲಿ ಹುಟ್ಟಿದ್ದರಿಂದ ಬಡತನ ಏನು ಎಂಬುದು ಗೊತ್ತಿದೆ. ಹೀಗಾಗಿಯೇ ಬಡವರ ಅನುಕೂಲಕ್ಕಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ಈ ಬಾರಿ ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತಂದಿದೇವೆ. ಕೇವಲ ಶಕ್ತಿ ಯೋಜನೆಗಾಗಿ ಪ್ರತಿವರ್ಷ 4 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದ್ದು, 1.40 ಕೋಟಿ ಕುಟುಂಬಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಫುಡ್ ಸೆಕ್ಯುರಿಟಿ ಆ್ಯಕ್ಟ್ ಜಾರಿಗೆ ತಂದಿದ್ದರು. ಅದರ ಜೊತೆಗೆ ಮತ್ತೆ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಲು ಯೋಜನೆ ಹಾಕಿಕೊಂಡಿದ್ದೆ, ಆದರೆ ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ಕೊಡದ ಹಿನ್ನಲೆಯಲ್ಲಿ ಪ್ರತಿ ತಿಂಗಳು ಹಣ ಹಾಕುತ್ತಿದ್ದೆವೆ. ನಾನು ಇರೋವರೆಗೆ ಈ ಐದು ಗ್ಯಾರಂಟಿ ಯೋಜನೆಗಳು ಇರುತ್ತವೆ ಎಂದರು.
ಇದೇ ವೇಳೆ ಸಮಾಜ ಒಡೆಯುವ ಜನರಿಂದ ಎಚ್ಚರಿಕೆಯಿಂದ ಇರಬೇಕು ಎಂದ ಅವರು, ನಾನು ಉಚಿತ ಯೋಜನೆಗಳನ್ನು ಪ್ರಾರಂಭಿಸಿದ ಕಾರಣ ನನ್ನನ್ನ ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನ ಮುಗಿಸಲು ನೀವು ಬಿಡ್ತಿರ ಎಂದು ಸಮಾರಂಭದಲ್ಲಿ ನೆರದಿದ್ದ ಸಾರ್ವಜನಿಕರನ್ನ ಕೇಳಿದರು.
ಕುಮಾರಸ್ವಾಮಿ, ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಸೇರಿಕೊಂಡು ನನ್ನನ್ನ ರಾಜಕೀಯವಾಗಿ ಮುಗಿಸುತ್ತೇನೆ ಎಂದರೆ ಅದು ಅವರ ಮೂರ್ಖತನ. ನನ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವವರಿಗೆ ನೀವು ಪಾಠ ಕಲಿಸಬೇಕು ಎಂದರು.