ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ. ಬಿಜೆಪಿಯ ಸಂಸದರು ಮತ್ತು ಶಾಸಕರ ಮೇಲೆ ಎಫ್‍ಐಆರ್‌ಗಳು ದಾಖಲಾಗುತ್ತಿವೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷದ ನಾಯಕ ಹಾಗೂ ಕೇಂದ್ರದ ಸಚಿವರ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕಾಂಗ್ರೆಸ್ ಶಾಸಕರ ಮೇಲೆ ಕ್ರಮ ಆಗಲಿಲ್ಲ. ಮಾಜಿ ಸಚಿವ ನಾಗೇಂದ್ರ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಎಸ್ಐಟಿ ಚಾರ್ಜ್ಶೀಟ್ನಲ್ಲಿ ಅವರ ಹೆಸರೇ ಇಲ್ಲ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ ಎಂದು ಶೋಭಾ ಪ್ರಶ್ನಿಸಿದರು. ಕರ್ನಾಟಕವನ್ನು ನೀವೇನು ಮಾಡಲು ಹೊರಟಿದ್ದೀರಿ? ನಾಗಮಂಗಲದಲ್ಲಿ ಘಟನೆ ನಡೆಯಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನನ್ನು ಪೊಲೀಸ್ ವ್ಯಾನಿನಲ್ಲಿ ಕರೆದುಕೊಂಡು ಹೋಗಿ ವಿಸರ್ಜನೆ ಮಾಡುವ ಘಟನೆ ನಡೆದಿದೆ. ಯಾಕಾಗಿ ಹೀಗಾಗಿದೆ? ಎಂದು ಪ್ರಶ್ನಿಸಿದರು.
ಆರ್.ಅಶೋಕ್ ಮತ್ತು ನಾನು ಮಾಡಿದ ತಪ್ಪೇನು? ಯಾವ ಅಪರಾಧಕ್ಕಾಗಿ ನೀವು ಎಫ್‍ಐಆರ್ ಹಾಕಿದ್ದೀರಿ? ನಾವು ನಿಮ್ಮನ್ನು ಕೇಳಿದ್ದೇ ನಮ್ಮ ಅಪರಾಧ. ನಿಮ್ಮನ್ನು ಪ್ರಶ್ನಿಸಿದ್ದೇ ಅಪರಾಧ. ಇವತ್ತು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದಕ್ಕಾಗಿ ಪ್ರಜಾತಂತ್ರವನ್ನು ಕಗ್ಗೊಲೆ ಮಾಡುವ ಕೆಲಸ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಸರ್ಕಾರ ಎಫ್ಐಆರ್ ಹಾಕಿದೆ, ಅದನ್ನು ನಾವು ಎದುರಿಸುತ್ತೇವೆ. ಪೊಲೀಸರು ನಮ್ಮನ್ನು ಬಂಧಿಸಬಹುದು, ನಾವು ಬಂಧನಕ್ಕೆ ಒಳಗಾಗುತ್ತೇವೆ. ನಾವು ಹೋರಾಟ ಮಾಡಿಕೊಂಡು ಬಂದವರು, ಹೋರಾಟ ಮುಂದುವರೆಸುತ್ತೇವೆ. ನಾವು ಗೊಡ್ಡು ಬೆದರಿಕೆಗೆ ಹೆದರಿಕೊಂಡು ಓಡಿ ಹೋಗಲ್ಲ. ಇದನ್ನೆಲ್ಲಾ ಕಾನೂನು ಮೂಲಕವೇ ಎದುರಿಸುತ್ತೇವೆ ಎಂದು ಶೋಭಾ ಹೇಳಿದರು.