ಬೆಂಗಳೂರು: ಕೇತಗಾನಹಳ್ಳಿ ಭೂಒತ್ತುವರಿ ಪ್ರಕರಣದಿಂದ ಕೆರಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಯುದ್ಧ ಸಾರಿದ್ದು, ಈ ನಡುವಲ್ಲೇ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ಮಾತುಗಳಿಗೆ ಹೆದರುವ ಮಗ ನಾನಲ್ಲ, ಅವರ ಹೆಸರಲ್ಲಿ ಎಷ್ಟು ಭೂಮಿಯಿದೆ ಎಂದು ಬಹಿರಂಗ ಪಡಿಸಲಿ, ನನ್ನ ಹೆಸರಲ್ಲಿ ಮತ್ತು ಮಕ್ಕಳ ಹೆಸರಲ್ಲಿ ಎಷ್ಟು ಭೂಮಿ ಇದೆ ನಾನು ಬಹಿರಂಗ ಮಾಡುತ್ತೇನೆ, ನಾನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದೇನೆಂದು ಸಾಬೀತಾದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದು ಹೇಳಿದರು.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕುಮಾರಸ್ವಾಮಿಯವರು, ಮಾಜಿ ಪ್ರಧಾನಿ ಮಗ ನಾನು.. 4 ಎಕರೆ ಭೂಮಿ ಒತ್ತುವರಿ ಮಾಡಿಕೊಳ್ಬೇಕಾ? ಎಂದು ಪ್ರಶ್ನಿಸಿದ್ದರು. ಅತಿಕ್ರಮಣದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು.
ಮುಡಾ ಕೇಸಲ್ಲಿ ಲೋಕಾಯುಕ್ತ ತನಿಖೆಯ ಪಾರದರ್ಶಕತೆ ಬಗ್ಗೆ ಮತ್ತೆ ದನಿ ಎತ್ತಿದ್ದರು. ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರ ಏಪ್ರಿಲ್ ಫೂಲ್ ಮಾಡುತ್ತಿದೆ ಎಂದು ಲೇವಡಿ ಮಾಡಿದ್ದರು.