ಸಿಎಂ ಸಿದ್ದರಾಮಯ್ಯ 
ರಾಜಕೀಯ

ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರೇ.. ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ: ಸಿದ್ದರಾಮಯ್ಯ

ಧಾರ್ಮಿಕ ಮೂಲಭೂತವಾದ, ಕೋಮುವೈಷಮ್ಯ ಎನ್ನುವುದು ಎಂತಹ ಹೀನ ಕೃತ್ಯವನ್ನೂ ಮಾಡಿಸಬಲ್ಲುದು ಎಂಬುದಕ್ಕೆ ಪುಟ್ಟಮಕ್ಕಳ ಮಾರಣಹೋಮಕ್ಕೆ ಕಾರಣವಾಗಬಹುದಾಗಿದ್ದ ಈ ಘಟನೆಯೇ ಸಾಕ್ಷಿ.

ಬೆಂಗಳೂರು: ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರು ಒಮ್ಮೆ ತಮ್ಮ‌ ಆತ್ಮವಿಮರ್ಷೆ ಮಾಡಿಕೊಳ್ಳಲಿ. ಬೆಳಗಾವಿ ಘಟನೆಯ ಹೊಣೆಯನ್ನು ಪ್ರಮೋದ್ ಮುತಾಲಿಕ್ ಹೊರುವರೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಪ್ರಶ್ನಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ 15 ದಿನಗಳ ಹಿಂದೆ ವಿಷ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಶಾಲೆ ಮುಖ್ಯ ಶಿಕ್ಷಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ, ಮುಖ್ಯ ಶಿಕ್ಷಕನ್ನು ಶಾಲೆಯಿಂದ ಓಡಿಸಲು ಆರೋಪಿಗಳು ಈ ಕೃತ್ಯ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರು, ಅವರನ್ನು ತಮ್ಮ ಊರಿನಿಂದ ಬೇರೆಡೆಗೆ ವರ್ಗಾವಣೆ ಮಾಡಿಸಬೇಕೆಂಬ ದುರುದ್ದೇಶದಿಂದ ಶಾಲಾಮಕ್ಕಳ ಕುಡಿಯುವ ನೀರಿಗೆ ವಿಷ ಹಾಕಿದ ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಸಾಗರ ಪಾಟೀಲ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ಕಳೆದ 15 ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ ಹಲವು ಮಕ್ಕಳು ಅಸ್ವಸ್ಥಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ‌ ಸಂಭವಿಸಿರಲಿಲ್ಲ.

ಧಾರ್ಮಿಕ ಮೂಲಭೂತವಾದ, ಕೋಮುವೈಷಮ್ಯ ಎನ್ನುವುದು ಎಂತಹ ಹೀನ ಕೃತ್ಯವನ್ನೂ ಮಾಡಿಸಬಲ್ಲುದು ಎಂಬುದಕ್ಕೆ ಪುಟ್ಟಮಕ್ಕಳ ಮಾರಣಹೋಮಕ್ಕೆ ಕಾರಣವಾಗಬಹುದಾಗಿದ್ದ ಈ ಘಟನೆಯೇ ಸಾಕ್ಷಿ. ದಯೆಯೇ ಧರ್ಮದ ಮೂಲವಯ್ಯ" ಎಂದು ಸಾರಿದ ಶರಣರ ನಾಡಿನಲ್ಲಿ ಈ ಮಟ್ಟಿನ ಕೌರ್ಯ, ದ್ವೇಷ ಹುಟ್ಟಲು ಸಾಧ್ಯವೇ? ಎಂಬುದನ್ನು ಈ ಕ್ಷಣಕ್ಕೂ ನನ್ನಿಂದ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರು ಒಮ್ಮೆ ತಮ್ಮ‌ ಆತ್ಮವಿಮರ್ಷೆ ಮಾಡಿಕೊಳ್ಳಲಿ. ಈ ಘಟನೆಯ ಹೊಣೆಯನ್ನು ಪ್ರಮೋದ್ ಮುತಾಲಿಕ್ ಹೊರುವರೇ? ವಿಜಯೇಂದ್ರ ಹೊರುವರೇ? ಆರ್.ಅಶೋಕ್ ಹೊರುವರೇ? ಇಂಥವರು ಮಾಡುವ ಸಮಾಜಘಾತುಕ ಕೃತ್ಯಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ನಾಯಕರು ಈಗ ಮುಂದೆ ಬಂದು ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಎಲ್ಲ ಬಗೆಯ ಮತೀಯವಾದ, ಮೂಲಭೂತವಾದಿತನಗಳು ಮನುಷ್ಯ ಸಮಾಜಕ್ಕೆ ಅಪಾಯಕಾರಿ. ದ್ವೇಷ ಭಾಷಣಗಳು, ಕೋಮು ಗಲಭೆಗಳ ತಡೆಗಾಗಿಯೇ ನಾವು ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ, ಅಂಥವರ ವಿರುದ್ಧ ಕಾನೂನಿನ ಪರಿಧಿಯೊಳಗೆ ಸಾಧ್ಯವಾದ ಎಲ್ಲಾ ಕ್ರಮವನ್ನು ವಹಿಸುತ್ತಿದ್ದೇವೆ. ನಮ್ಮ ಎಲ್ಲಾ ಪ್ರಯತ್ನಗಳು ಫಲ ಕೊಡಬೇಕಾದರೆ ಸಾರ್ವಜನಿಕರೂ ಇಂಥಾ ಶಕ್ತಿಗಳ ವಿರುದ್ಧ ಧ್ವನಿಯೆತ್ತಬೇಕು, ಪ್ರತಿರೋಧ ಒಡ್ಡಬೇಕು, ದೂರು ದಾಖಲಿಸಬೇಕು. ನನಗೆ ಈಗಲೂ ನಂಬಿಕೆಯಿದೆ, ಕೋಮುವಾದಿಗಳ ಸಂಖ್ಯೆಗಿಂತ ಕೂಡಿ ಬಾಳಬೇಕೆಂದು ಬಯಸುವ ಜನರ ಸಂಖ್ಯೆ ನೂರು ಪಟ್ಟು ಹೆಚ್ಚಿದೆ. ಮಕ್ಕಳ ಹತ್ಯಾಕಾಂಡ ನಡೆಸುವ ದುಷ್ಟ ಹುನ್ನಾರವನ್ನು ಭೇದಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆಗಳು. ಇಂಥ ಹೀನಕೃತ್ಯ ಎಸಗಿದ ದುರುಳರಿಗೆ ನ್ಯಾಯ ವ್ಯವಸ್ಥೆ ತಕ್ಕಶಿಕ್ಷೆ ನೀಡಲಿದೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಬಂಧನ!

Asia Cup Rising Stars T20: ಓಮನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಶಬರಿಮಲೆಯಲ್ಲಿ ಜನದಟ್ಟಣೆ: ಎರಡು ದಿನದಲ್ಲಿ 2 ಲಕ್ಷ ಅಯ್ಯಪ್ಪ ಭಕ್ತರ ಭೇಟಿ; ಮಹಿಳಾ ಭಕ್ತೆ ಸಾವು!

ಬಾಬಾ ಸಿದ್ದಿಕಿ ಕೊಲೆ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಅಮೆರಿಕದಿಂದ ಗಡೀಪಾರು!

POCSO case: ಯಡಿಯೂರಪ್ಪಗೆ ಸಂಕಷ್ಟ, ಡಿ. 2 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್!

SCROLL FOR NEXT