ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ, ಡಾ. ಹೆಚ್. ಸಿ. ಮಹಾವೇವಪ್ಪ ಸಾಂದರ್ಭಿಕ ಚಿತ್ರ 
ರಾಜಕೀಯ

KRS: ಇತಿಹಾಸದ ಪುಟಗಳನ್ನು ಗಲೀಜು ಮಾಡಲು ಹೋಗ್ಬೇಡಿ; ಸಿಎಂ ಸಿದ್ದರಾಮಯ್ಯ, ಮಹಾದೇವಪ್ಪ ವಿರುದ್ಧ ವಿಜಯೇಂದ್ರ ಕಿಡಿ!

ಕನ್ನಂಬಾಡಿ ಕಟ್ಟೆಗೆ (ಕೃಷ್ಣರಾಜ ಸಾಗರ) ರೋಚಕ ಇತಿಹಾಸವಿದೆ. ತ್ಯಾಗ ಮೆರೆದ ಹೆಗ್ಗಳಿಕೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು ಹಾಗೂ ಪರಿಶ್ರಮದ ಫಲವೇ ಕನ್ನಂಬಾಡಿ ಕಟ್ಟೆ

ಬೆಂಗಳೂರು: ಕೃಷ್ಣ ರಾಜಸಾಗರ (KRS)ಅಣೆಕಟ್ಟು ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಅವರು ಮೈಸೂರು ರಾಜಮನೆತನದ ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇತಿಹಾಸವನ್ನು ತಿರುಚಿದ್ದು, ರಾಜವಂಶಸ್ಥರ ಪರಂಪರೆಯನ್ನು ಅಗೌರವಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೋಮವಾರ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ, ಮೊದಲಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಮನೆತನದ ಬಗ್ಗೆ ಅಸಡ್ಡೆಯಿಂದ ನಡೆದುಕೊಂಡಿದ್ದಾರೆ. ಇತ್ತೀಚಿಗೆ ನಾಲ್ವಡಿ ಅವರಿಗಿಂತಲೂ ತಮ್ಮ ತಂದೆಯೇ ಮಿಗಿಲು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಹೇಳಿಕೊಂಡಿದ್ದರು. ಇದೀಗ ಮುಖ್ಯಮಂತ್ರಿಗಳ ಆಪ್ತ ಸಚಿವ ಡಾ. ಹೆಚ್. ಸಿ. ಮಹದೇವಪ್ಪ, ಕನ್ನಂಬಾಡಿ ಕಟ್ಟೆಗೆ ಮೊದಲು ಅಡಿಪಾಯ ಹಾಕಿದ್ದು ಟಿಪ್ಪು ಎಂದು ಹೇಳುವ ಮೂಲಕ ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ)ನಿರ್ಮಾಣದ ಹಿಂದಿನ ತ್ಯಾಗ- ಪರಶ್ರಮದ ಇತಿಹಾಸ ಹಾಗೂ ನಾಲ್ವಡಿಯವರ ಕೊಡುಗೆಯನ್ನು ಅಪಮಾನಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಕನ್ನಂಬಾಡಿ ಕಟ್ಟೆಗೆ (ಕೃಷ್ಣರಾಜ ಸಾಗರ) ರೋಚಕ ಇತಿಹಾಸವಿದೆ. ತ್ಯಾಗ ಮೆರೆದ ಹೆಗ್ಗಳಿಕೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು ಹಾಗೂ ಪರಿಶ್ರಮದ ಫಲವೇ ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ) ನಿರ್ಮಾಣವಾಯಿತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ, ತ್ಯಾಗ, ಕೊಡುಗೆಗಳ ಹೆಗ್ಗಳಿಕೆಯಿದೆ. 1908 ರಲ್ಲಿ ರೂಪಿಸಲಾದ ಯೋಜನೆಯನ್ನು ಮತ್ತಷ್ಟು ಪರಿವರ್ತಿಸಿ ಹತ್ತು ಹಲವು ಅಡ್ಡಿ ಆತಂಕ ತೊಂದರೆ ಅವಮಾನಗಳ ನಡುವೆ ಬ್ರಿಟಿಷ್ ಆಡಳಿತದಿಂದ ಅನುಮತಿ ಪಡೆದುಕೊಂಡ ಹಿನ್ನೆಲೆಯ ಪ್ರತಿ ಹೆಜ್ಜೆಗಳಿಗೂ ಪುಟ ಪುಟಗಳ ದಾಖಲೆಗಳು ಇಂದಿಗೂ ಜೀವಂತವಾಗಿವೆ ಎಂದು ಅವರು ತಿಳಿಸಿದ್ದಾರೆ.

1911 ರಿಂದ ಅಧಿಕೃತವಾಗಿ ಆರಂಭವಾದ ಯೋಜನೆ 1932ರಲ್ಲಿ ಪೂರ್ಣಗೊಂಡಿದ್ದಕ್ಕೆ ಎಷ್ಟು ವೆಚ್ಚವಾಯಿತು, ಯೋಜನೆ ಪೂರ್ಣಗೊಳ್ಳಲು ಆರ್ಥಿಕ ಸಂಕಷ್ಟ ಎದುರಾದಾಗ ನಾಲ್ವಡಿ ಅವರ ಮಾತೆ ವಾಣಿವಿಲಾಸ ಸನ್ನಿಧಾನ (ಕೆಂಪರಾಜಮ್ಮಣ್ಣಿ) ಹಾಗೂ ಅವರ ಪತ್ನಿ ಕೃಷ್ಣ ವಿಲಾಸ ಸನ್ನಿಧಾನ ಅವರು ಲಕ್ಷಾಂತರ ಜನರಿಗೆ ಅನ್ನ ನೀಡುವ ಯೋಜನೆ ಪೂರ್ಣಗೊಳ್ಳುವುದಕ್ಕಿಂತ ಖಜಾನೆಯಲ್ಲಿರುವ ವಜ್ರ, ವೈಢೂರ್ಯಗಳು ಹೆಚ್ಚಿನದ್ದಲ್ಲ ಎಂಬ ತ್ಯಾಗ ಮನೋಭಾವ ಪ್ರದರ್ಶಿಸಿ ತಮ್ಮ ಸ್ವಂತ ಒಡವೆಗಳನ್ನು ಮಾರಾಟ ಮಾಡಿ ಕನ್ನಂಬಾಡಿ ಕಟ್ಟೆ ಕಟ್ಟಿಸಿದ್ದಕ್ಕೆ ಐತಿಹಾಸಿಕ ತ್ಯಾಗ ಮೆರೆದ ಆನಂದ ಭಾಷ್ಪತರಿಸುವ ಕಥೆ ಮೈಸೂರು ಸಂಸ್ಥಾನದ ಪ್ರತಿ ಮನೆ,ಮನೆಯಲ್ಲೂ ಇಂದಿಗೂ ನಿತ್ಯ ನೆನಪಿನ ಸ್ಮರಣೆಯಾಗಿ ಉಳಿದಿದೆ ಎಂದಿದ್ದಾರೆ.

ಅಣೆಕಟ್ಟೆ ನಿರ್ಮಾಣಕ್ಕಾಗಿ ಸರ್.ಎಂ ವಿಶ್ವೇಶ್ವರಯ್ಯನವರ ವಿಶೇಷ ಕಾಳಜಿ ಹಾಗೂ ಪರಿಶ್ರಮ ಸೇರಿದಂತೆ ನೂರಾರು ಮಹನೀಯರ ಪರಿಶ್ರಮದ ಬೆವರಿನ ಕಥೆಯಿದೆ. ಅಂತಹ ಚಾರಿತ್ರಿಕ ಅಣೆಕಟ್ಟೆ ನಿರ್ಮಾಣವೂ ಸೇರಿದಂತೆ ನೂರಾರು ಜನಕಲ್ಯಾಣ ಕೈಗೊಂಡ ಕಾರಣಕ್ಕಾಗಿ ಮಹಾತ್ಮ ಗಾಂಧಿ ಅವರಿಂದ 'ರಾಜಋಷಿ’ಎಂದು ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಕನ್ನಂಬಾಡಿ ಕಟ್ಟೆಗೆ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್.ಸಿ. ಮಹಾದೇವಪ್ಪನವರೇ, ಟಿಪ್ಪು ಸುಲ್ತಾನ್ ಕೆಆರ್‌ಎಸ್‌ ಅಣೆಕಟ್ಟು ಕಟ್ಟಲು ಪ್ರಯತ್ನಿಸಿದ್ದ ಯಾವುದಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಿ, ಕನ್ನಂಬಾಡಿ ಕಟ್ಟೆ ನಿರ್ಮಾಣ ಹಂತದ ಪ್ರತಿ ಹೆಜ್ಜೆಯ ಇತಿಹಾಸದ ದಾಖಲೆಗಳನ್ನು ನಾವು ಬಿಡುಗಡೆ ಮಾಡುತ್ತೇವೆ. ಟಿಪ್ಪು ಪರಿಶ್ರಮದ ಬಗ್ಗೆ ನಿಮ್ಮಲ್ಲಿ ಯಾವುದಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.

ಟಿಪ್ಪು ನಿಧನವಾಗಿದ್ದು 1799 ರಲ್ಲಿ ಕನ್ನಂಬಾಡಿ ಕಟ್ಟುವ ಯೋಜನೆ ಪ್ರಾರಂಭಿಸಿದ್ದು 1908 ರಲ್ಲಿ, (ಅಂದರೆ ಶತಮಾನಗಳ ಅಂತರದಲ್ಲಿ ) ನಾಲಿಗೆ ಹೊರಳುತ್ತದೆ ಎಂದು ಇತಿಹಾಸದ ಪುಟಗಳನ್ನು ಗಲೀಜು ಮಾಡಲು ಹೋಗಬೇಡಿ, ಇಡೀ ದೇಶದಲ್ಲೇ ಅತ್ಯಂತ ಶ್ರೇಷ್ಠ ಆಡಳಿತ ನೀಡಿ ವಿಶ್ವಮಾನ್ಯರಾದ ಮೈಸೂರು ರಾಜವಂಶಸ್ಥರು ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚರಿತ್ರೆಯನ್ನು ಸಾಧ್ಯವಾದರೆ ಗೌರವಿಸಿ, ಅಪಮಾನಿಸಿ ಜನರಿಂದ ಛೀಮಾರಿ ಹಾಕಿಸಿಕೊಳ್ಳಬೇಡಿ. ಟಿಪ್ಪು ಸಂತತಿಯನ್ನು ವೈಭವೀಕರಿಸಿ ಮುಸ್ಲಿಂ ಮತಗಳಿಕೆಯನ್ನು ಗಟ್ಟಿಗೊಳಿಸಿಕೊಳ್ಳುವುದು ನಿಮ್ಮ ಕಾರ್ಯ ಸೂಚಿ ಎಂಬುದು ನಾಡಿನ ಜನತೆಗೆ ತಿಳಿದಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಬಂಧನ!

Asia Cup Rising Stars T20: ಓಮನ್ ತಂಡವನ್ನು ಸೋಲಿಸಿ ಭಾರತ ಸೆಮಿಫೈನಲ್ ಪ್ರವೇಶ

ಶಬರಿಮಲೆಯಲ್ಲಿ ಜನದಟ್ಟಣೆ: ಎರಡು ದಿನದಲ್ಲಿ 2 ಲಕ್ಷ ಅಯ್ಯಪ್ಪ ಭಕ್ತರ ಭೇಟಿ; ಮಹಿಳಾ ಭಕ್ತೆ ಸಾವು!

ಬಾಬಾ ಸಿದ್ದಿಕಿ ಕೊಲೆ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಅಮೆರಿಕದಿಂದ ಗಡೀಪಾರು!

POCSO case: ಯಡಿಯೂರಪ್ಪಗೆ ಸಂಕಷ್ಟ; ಡಿಸೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್!

SCROLL FOR NEXT