ರಾಜಕೀಯ ವಿಶ್ಲೇಷಕ ಮತ್ತು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಹಿರಂಗ ಬೆಂಬಲ ನೀಡಿದ್ದಾರೆ.
ರಾಹುಲ್ ಗಾಂಧಿ ಬಿಡುಗಡೆ ಮಾಡಿದ ದತ್ತಾಂಶವು ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಳ್ಳಬಹುದು ಎಂದು ಯೋಗೇಂದ್ರ ಯಾದವ್ ಎಚ್ಚರಿಸಿದ್ದಾರೆ.
ಚುನಾವಣಾ ಆಯೋಗ ವಿರುದ್ಧ ರಾಹುಲ್ ಗಾಂಧಿ ಆರೋಪದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ ಯೋಗೇಂದ್ರ ಯಾದವ್, ದಶಕಗಳಿಂದ ಭಾರತದ ಚುನಾವಣಾ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ಸಮಗ್ರತೆಯನ್ನು ನಾನು ಸಮರ್ಥಿಸಿಕೊಂಡಿದ್ದೇನೆ. ಆದರೆ ಈ ಪುರಾವೆಗಳು ಈಗ ಗಂಭೀರ ಪರೀಕ್ಷೆಯನ್ನು ಬಯಸುತ್ತಿವೆ ಎಂದಿದ್ದಾರೆ.
"ನಾನು ಪ್ರಪಂಚದಾದ್ಯಂತ ಹಲವಾರು ಉಪನ್ಯಾಸಗಳನ್ನು ನೀಡಿದ್ದೇನೆ. ಅಮೆರಿಕ ಮತ್ತು ಬ್ರಿಟನ್ ನಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ಕಲಿಯುವಂತೆ ಹೇಳುತ್ತೇನೆ" ಎಂದು ಯಾದವ್ ಹೇಳಿದ್ದಾರೆ.
ಆದರೆ "ಕರ್ನಾಟಕದ ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ, ರಾಹುಲ್ ಗಾಂಧಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ನಕಲಿ ಎಂದು ತೋರಿಸಿದ್ದಾರೆ. ಮತದಾರರ ಪಟ್ಟಿಯು ಶೇ. 15-20 ರಷ್ಟು ತಪ್ಪಾಗಿದೆ. ಹೀಗಾಗಿ ಇದು ಸಣ್ಣ ಅಕ್ರಮವಲ್ಲ" ಎಂದು ಅವರು ತಿಳಿಸಿದ್ದಾರೆ.
ನಾನು ಬಹಳ ಹಿಂದಿನಿಂದಲೂ ಅಕ್ರಮಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದೆ. ಆದರೆ ದತ್ತಾಂಶವಿಲ್ಲದ ಕಾರಣ ಮಾತನಾಡಿರಲಿಲ್ಲ. "ಮಧ್ಯಪ್ರದೇಶ, ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳ ನಂತರ, ನನಗೆ ಏನೋ ಅನುಮಾನಾಸ್ಪದವೆನಿಸಿತು. ಆದರೆ ನನ್ನ ಬಳಿ ಪುರಾವೆ ಇರಲಿಲ್ಲ. ಈಗ ರಾಹುಲ್ ಗಾಂಧಿ ಸ್ಫೋಟಕ ಪುರಾವೆಗಳನ್ನು ಪ್ರಸ್ತುತಪಡಿಸಿದ್ದಾರೆ" ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.
ತನಿಖೆ ಆರಂಭಿಸುವ ಬದಲು ರಾಹುಲ್ ಗಾಂಧಿಯವರಿಂದ ಅಫಿಡವಿಟ್ ಸಲ್ಲಿಸಬೇಕೆಂಬ ಚುನಾವಣಾ ಆಯೋಗದ ಬೇಡಿಕೆಯನ್ನು ಟೀಕಿಸಿದ ಅವರು, "ಯಾವುದೇ ವಿಶ್ವಾಸಾರ್ಹ ಚುನಾವಣಾ ಆಯೋಗವು ಸಾಕ್ಷ್ಯಗಳನ್ನು ತನಿಖೆ ಮಾಡುತ್ತದೆ, ಪಟ್ಟಿಗಳನ್ನು ಸರಿಪಡಿಸುತ್ತದೆ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುತ್ತದೆ. ಬದಲಾಗಿ, ಅದು ವಿರೋಧ ಪಕ್ಷದ ನಾಯಕನಿಗೆ ಬೆದರಿಕೆ ಹಾಕುತ್ತಿದೆ. ಅದು ನನ್ನ ಅನುಮಾನ ಮತ್ತಷ್ಟು ದೃಢಪಡಿಸುತ್ತದೆ" ಎಂದಿದ್ದಾರೆ.