ಬೆಂಗಳೂರು: ಇತ್ತೀಚೆಗಿನ ರಾಜಕೀಯ ವ್ಯವಸ್ಥೆಯು ಪಕ್ಷದ ವರಿಷ್ಠರ ಟೀಕಿಸುವಂತಿಲ್ಲ, ಟೀಕಿಸಿದರೆ ರಾಜಕೀಯ ಜೀವನ ಅಂತ್ಯ ಎಂಬಂತಾಗಿದೆ ಎಂದು ಬಿಜೆಪಿ ಎಂಎಲ್‌ಸಿ ವಿಶ್ವನಾಥ್ ಅವರು ಟೀಕಿಸಿದ್ದಾರೆ.
ರಾಹುಲ್ ಗಾಂಧಿಯವರ ಮತಗಳ್ಳತನ ಆರೋಪವನ್ನು ಅಪಹಾಸ್ಯ ಮಾಡಿದ ಬಳಿಕ ರಾಜಣ್ಣ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ.
ಈ ಕುರಿತ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ವಿಶ್ವನಾಥ್ ಅವರು ಯಾವುದೇ ರಾಜಕೀಯ ಪಕ್ಷ, ಕಾಂಗ್ರೆಸ್ ಅಥವಾ ಬಿಜೆಪಿ ಆಗಿರಲಿ, ಪಕ್ಷದ ನಾಯಕರನ್ನು ಟೀಕಿಸುವ ಹಾಕಿಲ್ಲ ಎಂಬಂತಾಗಿದೆ. ರಾಜಣ್ಣ ರಾಹುಲ್ ಗಾಂಧಿ ವಿರುದ್ಧ ಮಾತನಾಡಿ ವಜಾಗೊಂಡಿದ್ದಾರೆ. ಪಕ್ಷದ ನಾಯಕರು ಹೇಳಿದ್ದೆಲ್ಲವೂ ಯಾವಾಗಲೂ ಸರಿಯಾಗಿರುತ್ತದೆಯೇ? ಎಂದು ಪ್ರಶ್ನಿಸಿದರು.
ನಾನು ಸದನದ ಸದಸ್ಯ, ನಾನು ಮಾತನಾಡುವಾಗ ಸಚಿವರೆಲ್ಲ ಎದ್ದು ಮಾತನಾಡೋದು ಸರಿಯಲ್ಲ. ಪಕ್ಷದ ನಾಯಕರ ಬಗ್ಗೆ ಮಾತಾಡಿದ್ರೆ ಮುಗಿತು ಕತೆ. ಎಲ್ಲಿದೆ ಆಂತರಿಕ ಪ್ರಜಾಪ್ರಭುತ್ವ ಎಂದರು.
ಈ ವೇಳೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು, ಆಪರೇಷನ್ ಕಮಲ ಆಯ್ತಲ್ಲ, ಎಲ್ಲಿದೆ ಪ್ರಜಾಪ್ರಭುತ್ವ ಎಂದು ವ್ಯಂಗ್ಯವಾಡಿದರು.
ನಾನು ಯಾವುದೇ ರಾಜಕೀಯ ಪಕ್ಷದ ಬಗ್ಗೆ ಮಾತಾಡುತ್ತಿಲ್ಲ. ರಾಹುಲ್ ಗಾಂಧಿ ದೇಶದ ಕಾಂಗ್ರೆಸ್ ನಾಯಕ, ಅವರ ಹೆಸರನ್ನ ಪ್ರಸ್ತಾಪಿಸಿದರೆ ತಪ್ಪೇನು? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ರಾಜಣ್ಣ ವಜಾಗೊಳಿಸುವಂತೆ ರಾಹುಲ್ ಸೂಚನೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹಿಂದುಳಿದ ವರ್ಗಗಳ ಒಬ್ಬ ನಾಯಕನಾಗಿದ್ದ ನಾಗೇಂದ್ರರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಇದೀಗ ರಾಜಣ್ಣ ಅವರನ್ನ ವಜಾಗೊಳಿಸುವ ಮೂಲಕ ಅವಸರದ ತೀರ್ಮಾನ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.
ನಾನೂ ಕೂಡಾ ನಿಮ್ಮ ಜೊತೆ 40 ವರ್ಷಗಳ ಕಾಲ ಇದ್ದವನು. ಮೂರೂ ಪಾರ್ಟಿಯಲ್ಲಿದ್ದವನು. ನನ್ನ ಝಂಡಾ ಬದಲಾಗಬಹುದು. ಆದರೆ, ಅಜೆಂಡಾ ಬದಲಾಗಲ್ಲ. ಕಾಂಗ್ರೆಸ್ ಈಗ ಸಿದ್ಧಾಂತದ ಮೇಲೆ ನಿಂತಿಲ್ಲ. ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ತೆಗೆಯಬೇಕು ಎಂದು ಯಾರೂ ಕೇಳಿರಲಿಲ್ಲ. ಆದರೂ ಯಾವ ಕಾರಣಕ್ಕಾಗಿ ಅವರನ್ನು ತೆಗೆಯಬೇಕಾಯಿತು ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.